ದೇವದುರ್ಗ: ಯುವಜನರಲ್ಲಿ ಎಚ್‌ಐವಿ ಸೇರಿ ಇತರ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಶಾಲೆ- ಕಾಲೇಜು ಹಂತದಲ್ಲೇ ಈ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾನೂನು ಸೇವಾಸಮಿತಿ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಈ ಮೊದಲಿಗೆ ಹೊಲಿಸಿದರೆ ಎಚ್‌ಐವಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ ಎಂದರು.
ಕೆಲ ವರ್ಷಗಳ ಹಿಂದೆ ಸೋಂಕಿತರನ್ನು ಅತ್ಯಂತ ಕೀಳಾಗಿ ನೋಡಲಾಗುತ್ತಿತ್ತು. ಆರೋಗ್ಯ ಇಲಾಖೆ, ಸರ್ಕಾರದ ಕ್ರಮಗಳಿಂದ ರೋಗಿಗಳು ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಧೈರ್ಯವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಇದರಿಂದ ಸೋಂಕು ಹರಡುವ ಪ್ರಮಾಣ ತಗ್ಗಿದೆ. ಇದರ ಪ್ರಮಾಣ ಜೀರೋಗೆ ಇಳಿಸಲು ಎಲ್ಲರೂ ಶ್ರಮಿಸಬೇಕು ಎಂದು ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಮಾತನಾಡಿ, ಏಡ್ಸ್ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ನಿರಂತರ ಜಾಗೃತಿ ಫಲವಾಗಿ ರೋಗ ನಿಯಂತ್ರಣಕ್ಕೆ ಬಂದಿದೆ. ಆದರೂ, ಮೈಮರೆಯದೆ ಜನರು ಆರೋಗ್ಯದ ಕಡೆ ಗಮನಹರಿಸಬೇಕು. ಏಡ್ಸ್ ತಡೆಗಟ್ಟಲು ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶ ರಫೀಕ್ ಅಹ್ಮದ್, ಐಸಿಟಿಸಿ ಆಪ್ತ ಸಮಾಲೋಚಕ ರಾಜೇಶ ದೇಶಪಾಂಡೆ, ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಬಸವರಾಜ ಹೇಮನೂರು, ನಂದಕುಮಾರ್, ಶಿವಪ್ಪ ಭೂಮನಗುಂಡ, ಗೀತಮ್ಮ ಚನ್ನಬಸಯ್ಯ, ನಾಗಲಿಂಗ, ರಾಜೇಶ್, ಶಾರೋನ್, ಹುಸೇನ್, ಜೀವನ್, ಮುದಿಯಪ್ಪ, ರಂಗಮ್ಮ, ವೇಣು, ರವಿ, ಭೀಮಮ್ಮ, ಬಸವರಾಜ್ ಇತರರಿದ್ದರು.