ಜಿಲ್ಲೆ

ಶಾಲಾ ಮಕ್ಕಳಿಗೆ ವಿಮಾನ ಭಾಗ್ಯ! ; ಸ್ವಂತ ಖರ್ಚಿನಲ್ಲಿ ಕರೆದೊಯ್ಯುತ್ತಿರುವ ಕಣನೂರುಪಾಳ್ಯದ ಶಿಕ್ಷಕ ಸಂಸ್ಕೃತ ಶಿಕ್ಷಕ ವಿದ್ವಾನ್ ರಾಜಣ್ಣರಿಂದ ವ್ಯವಸ್ಥೆ

ರೇಷ್ಮೆ ನಗರ ಡೆಸ್ಕ್

ಮಾಗಡಿ : ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ 51 ಮಕ್ಕಳು, 8 ಮಂದಿ ಸಿಬ್ಬಂದಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸಲು ಶಿಕ್ಷಕ ರಾಜಣ್ಣ ಮುಂದಾಗಿದ್ದಾರೆ.

ತಾಲೂಕಿನ ಕಣನೂರುಪಾಳ್ಯದ ಸಂಸ್ಕೃತ ಶಿಕ್ಷಕ ವಿದ್ವಾನ್ ಎಂ.ರಾಜಣ್ಣ ತಮ್ಮ ಸಂಬಳದ ಉಳಿತಾಯದ ಹಣದಲ್ಲಿ 2.76 ಲಕ್ಷ ರೂ. ಖರ್ಚು ಮಾಡಿ ಶಾಲೆಯ ಕನ್ನಡ ಮಾಧ್ಯಮದ 8, 9, 10ನೇ ತರಗತಿ ಮಕ್ಕಳನ್ನು ಬೆಂಗಳೂರಿನಿಂದ ಮಹಾರಾಷ್ಟ್ರದ ಪೂನಾಕ್ಕೆ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.

ಡಿ.3 ರಂದು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಪೂನಾಕ್ಕೆ ತೆರಳಿ ನಂತರ ಬಸ್‌ನಲ್ಲಿ ಶಿರಡಿ, ಸಿಂಗಾಪುರ, ನಾಸಿಖ್, ಅಂಜತಾ,ಯಲ್ಲೋರ, ಪಂಡರಾಪುರ, ಕೊಲ್ಲಾಪುರ ಮೊದಲಾದ ಸ್ಥಳೀಯ ಪ್ರವಾಸಿ ಕೇಂದ್ರಗಳಿಗೆ ತೆರಳಿ ಡಿ.7ರಂದು ಬಸ್‌ನಲ್ಲಿ ಹರಳೂರು ಗ್ರಾಮಕ್ಕೆ ಹಿಂತಿರುಗುವರು.

ಸಂಸ್ಕೃತ ಶಿಕ್ಷಕ ರಾಜಣ್ಣ ಮಾತನಾಡಿ, ಮಕ್ಕಳ ಏಳ್ಗೆಯೇ ದೈವಸಾಕ್ಷಾತ್ಕಾರ. ಮಕ್ಕಳಿದ್ದರೆ ಮಾತ್ರ ನಮಗೊಂದು ಬೆಲೆ. ಕೋವಿಡ್ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಮಕ್ಕಳು, ಶಾಲೆ, ಶಿಕ್ಷಕರ ನಡುವೆ ಸಂಬಧವೇ ಇಲ್ಲದಂತೆ ಜೀವನ ಮಾಡಿದಾಗ ಮಕ್ಕಳು ನಿಜಕ್ಕೂ ದೈವಸ್ವರೂಪಿಗಳಂತೆ ಕಂಡರು. ಯಾವಾಗ ಅವರನ್ನು ನೋಡುತ್ತೇವೆಯೋ ಯಾವಾಗ ಅವರಿಗೆ ಪಾಠ ಮಾಡುತ್ತೇವೆಯೋ ಎಂಬ ಹಪಹಪಿ ಹೆಚ್ಚಾಗಿತ್ತು. ಆಗಲೇ ನಿರ್ಧಾರ ಮಾಡಿದ್ದೆ, ಮಕ್ಕಳನ್ನು ಒಮ್ಮೆಯಾದರೂ ನನ್ನ ಉಳಿತಾಯದ ಹಣದಲ್ಲಿ ವಿಮಾನ ಪ್ರಯಾಣ ಮಾಡಿಸಬೇಕೆಂದು. ಸಂದರ್ಭ ಈಗ ಕೂಡಿ ಬಂದಿದೆ.

ಮಕ್ಕಳು, ಶಿಕ್ಷಕ ವೃಂದ, ಇತರ ಸಿಬ್ಬಂದಿಗಳೊಂದಿಗೆ ಡಿ.3 ರಂದು ಮಹಾರಾಷ್ಟ್ರದ ಪೂನಾಕ್ಕೆ ವಿಮಾನ ಪ್ರಯಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಮಕ್ಕಳ ಏಳ್ಗೆಯಾದರೆ, ಅವರು ಖುಷಿಯಾಗಿದ್ದರೆ ಅದುವೇ ನಿಜವಾದ ದೇವರ ಪೂಜೆ ಎಂದು ಭಾವಿಸಿಕೊಂಡಿದ್ದೇನೆ ಎಂದರು.

ಓದುವ ಸಂದರ್ಭದಲ್ಲೇ ಮಕ್ಕಳು ವಿಮಾನ ಪ್ರಯಾಣವನ್ನು ಒಮ್ಮೆಯಾದರೂ ಮಾಡಬೇಕು. ಏಕೆಂದರೆ ನನಗೆ ಚಿಕ್ಕಂದಿನಲ್ಲಿ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹಾರಾಡಬೇಕು ಎಂಬ ಆಸೆಯಿತ್ತು. ಆಗದೇ ಇದ್ದಾಗ ಬಹಳ ಸಂಕಟ ಪಟ್ಟಿದ್ದೆ. ಇಂತಹ ಸಂಕಟ ನಮ್ಮ ಮಕ್ಕಳು ಪಡಬಾರದು. ಅದಕ್ಕಾಗಿ ಒಮ್ಮೆಯಾದರು ಅವರನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು. ಮನುಷ್ಯ ಎತ್ತರಕ್ಕೆ ಹೋದಾಗ ಅವನ ಸಣ್ಣತನಗಳೆಲ್ಲಾ ಗೊತ್ತಾಗುತ್ತದೆ. ಮಕ್ಕಳ ಆಲೋಚನೆಗಳು ಎತ್ತರಕ್ಕೆ ಬೆಳೆಯಬೇಕು. ಅದಕ್ಕಾಗಿ ಇಂತಹ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯ ಮಂಜೂರಾತಿಗೆ ರಾಜಣ್ಣನ ಶ್ರಮ: ಮಾಗಡಿ ತಾಲೂಕು ತಿಪ್ಪಸಂಸ್ರ ಹೋಬಳಿಯಲ್ಲಿ ನೂರು ಎಕರೆ ಜಾಗದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಮಂಜೂರಾಗಲು ರಾಜಣ್ಣರವರ ಶ್ರಮವೂ ಇದೆ. ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಣ್ಣ ಅವರಿಗೆ ಸಾಲುಮರದ ತಿಮ್ಮಕ್ಕ ಪರಿಸರ ಪ್ರಶಸ್ತಿ, ಉತ್ತಮ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿವೆ.

ರಾಜಣ್ಣ ಅವರು ನಮ್ಮ ಶಾಲೆಯ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಭಾವಂತರ ಸಂಪರ್ಕದಲ್ಲಿರುವ ರಾಜಣ್ಣ ಮಕ್ಕಳೊಂದಿಗೆ ಅತ್ಯಂತ ಅಕ್ಕರೆಯಿಂದ ಬೆರೆಯುತ್ತಾರೆ. ಹಳ್ಳಿಗಾಡಿನ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಿರುವುದು ಖುಷಿಯಾಗುತ್ತಿದೆ. ಮಕ್ಕಳಿಗೆ ಚೈತನ್ಯ ತುಂಬುವ ಕೆಲಸವನ್ನು ರಾಜಣ್ಣ ಮಾಡುತ್ತಿದ್ದಾರೆ. ಎಸ್.ಗುರುಮೂರ್ತಿ, ಮುಖ್ಯಶಿಕ್ಷಕ, ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ.