ಜಿಲ್ಲೆ

ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಚಾಮರಾಜನಗರ: ದಕ್ಷಿಣ ಭಾರತದ ಹೆಸರಾಂತ ಗಾಯಕ ಗಾನಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಕನ್ನಡಿಗರಿಗೆ ಸಂತೋಷ ತಂದಿದೆ ಎಂದು ಸಾಹಿತಿ ಎಸ್.ಲಕ್ಷ್ಮಿ ನರಸಿಂಹ ತಿಳಿಸಿದರು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ ಎಸ್‌ಪಿಬಿ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಪಂಚ ಭಾಷೆಗಳಲ್ಲಿ ಗೀತೆಗಳನ್ನು ಹಾಡುವ ಮೂಲಕ ಚಿತ್ರರಂಗದ ಅನೇಕ ನಟರಿಗೆ ಹೆಸರು ತಂದು ಕೊಟ್ಟಿದ್ದಾರೆ, ಅವರು ಶಂಕರಾಭರಣ ಚಿತ್ರಕ್ಕೆ ಹಾಡುವ ಮೂಲಕ ವಿಶ್ವ ಮಾನ್ಯ ಸ್ಥಾನಮಾನ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ವೇದಿಕೆಯ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ, ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಪುಸ್ತಕ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಕಲಾ ಪೋಷಕ ಸುರೇಶ್ ಗೌಡ, ಗುತ್ತಿಗೆದಾರ ಉಮ್ಮತ್ತೂರು ಚಂದ್ರು, ಸಮಾಜ ಸೇವಕರಾದ ಡಾ. ಪರಮೇಶ್ವರಪ್ಪ, ಎಲ್. ಸುರೇಶ್, ಕನ್ನಡ ಪರ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ, ಬಂಗಾರು, ಶಿವಶಂಕರ, ಮಧು ಇತರರು ಇದ್ದರು.