ಎನ್.ಆರ್.ಪುರ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಅರ್ಪಿಸುತ್ತಿದ್ದೇವೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತಾಲೂಕು ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದರು.
ಮುತ್ತಿನಕೊಪ್ಪ ಗ್ರಾಮದ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಿಂದ ಶಾಲಾ ಬ್ಯಾಗ್, ಛತ್ರಿ, ನೋಟ್‌ಬುಕ್ ಇತರ ಶಾಲಾ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಿಂದ ಪಡೆದಿದ್ದನ್ನು ಸ್ವಲ ಭಾಗವಾದರೂ ಸಮಾಜಕ್ಕೆ ನೀಡಬೇಕು ಎಂಬ ಭಾವದಿಂದ ಎಲ್ಲ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದರು. ಸೀನಿಯರ್ ಚೇಂಬರ್ ಪೂರ್ವಾಧ್ಯಕ್ಷ ಎಚ್.ಆರ್.ದಿನೇಶ್ 20 ಸಾವಿರ ರೂಪಾಯಿ ಬೆಲೆ ಬಾಳುವ ಶಾಲಾ ಪರಿಕರಗಳನ್ನು ಕುಶಾಲಪುರ ಶಾಲೆ ಮಕ್ಕಳಿಗೆ ನೀಡಿದ್ದಾರೆ. ಎಚ್.ಆರ್.ದಿನೇಶ್ ಅವರು ಮುತ್ತಿನಕೊಪ್ಪದ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು ಎಂದರು. ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಎಚ್.ಆರ್.ದಿನೇಶ್, ಬಡ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಈ ಶಾಲೆಗೆ ಕೊಡುಗೆ ನೀಡಲು ಹೆಮ್ಮೆಯಾಗುತ್ತಿದೆ. ಮಕ್ಕಳು ಅತ್ಯಂತ ಚಟುವಟಿಕೆಯಿಂದ ಇದ್ದಾರೆ. ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತರಬೇಕು ಎಂದರು. ಸೀನಿಯರ್ ಚೇಂಬರ್ ಸದಸ್ಯರಾದ ನಾಗೇಶ್ ಗೌಡ, ಕುಮಾರ ಜಿ. ಶೆಟ್ಟಿ, ಎಚ್.ಟಿ.ಧನಂಜಯ, ಎಸ್.ಎಸ್.ಗಿರಿ, ಕೆ.ಎನ್.ಸತೀಶ್, ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಮುಖ್ಯಶಿಕ್ಷಕಿ ಗೀತಾ ಪ್ರಕಾಶ್, ಶಿಕ್ಷಕ ಜಗದೀಶ್ ಇದ್ದರು.