ಜಿಲ್ಲೆ

ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ಪೂರೈಕೆ

ಡಂಬಳ: ಕರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾ.14 ರಿಂದ ಏ.10 ವರೆಗೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರಜೆ ಘೊಷಿಸಲಾಗಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗಿರಲಿಲ್ಲ. ಬದಲಾಗಿ ಅಕ್ಕಿ ಮತ್ತು ಬೇಳೆ ವಿತರಿಸುವ ಕಾರ್ಯ ನಡೆದಿದೆ. ಮುಂಡರಗಿ ತಾಲೂಕಿನಲ್ಲಿ ಒಟ್ಟು ಸರ್ಕಾರಿ ಪ್ರಾಥಮಿಕ ಶಾಲೆ 87, ಸರ್ಕಾರಿ ಪ್ರೌಢ ಶಾಲೆ 29 ಶಾಲೆಗಳಲ್ಲಿ ಒಟ್ಟು 19,212 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಅಕ್ಷರ ದಾಸೋಹ ಯೋಜನೆ ಅಡಿ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಹೆಚ್ಚಿಸಲು ಅಕ್ಕಿ ಮತ್ತು ಬೆಳೆ ನೀಡಲಾಗುತ್ತಿದೆ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.

ಸರ್ಕಾರ ಆದೇಶದಂತೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ವಿದ್ಯಾಥಿಗಳಿಗೆ ಅಕ್ಕಿ ಹಾಗೂ ಬೇಳೆ ವಿತರಿಸಲಾಗುತ್ತದೆ. ತಾಲೂಕಿನ ಶೇ.80ರಷ್ಟು ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ.| ರಂಜನಾ ತಳಿಗೇರಿ ಸಹಾಯಕ ನಿರ್ದೇಶಕಿ ಅಕ್ಷರ ದಾಸೋಹ
ಮಕ್ಕಳು, ಪಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಪಾಲಿನ ಅಕ್ಕಿ ಮತ್ತು ಬೇಳೆ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಲಾಗಿದೆ.| ಆರ್.ಬಿ. ಕವಲೂರು, ಮುಖ್ಯೋಪಾಧ್ಯಾಯ, ಡಂಬಳ

2.25 ಲಕ್ಷ ರೂ.ದೇಣಿಗೆ ವಿತರಣೆ

ಮುಂಡರಗಿ: ತಾಲೂಕಿನ ಸಹಕಾರ ಸಂಘ, ಸಂಸ್ಥೆಗಳ ವತಿಯಿಂದ ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಅವರ ಮೂಲಕ ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ಎಪಿಎಂಸಿ ಹಾಗೂ ಮೃಡಗಿರಿ ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರ ನೇತೃತ್ವದಲ್ಲಿ 2.25 ಲಕ್ಷ ರೂ.ದೇಣಿಗೆ ನೀಡಲಾಯಿತು.

ಈ ವೇಳೆ ಮಾತನಾಡಿದ ಶಿವಕುಮಾರಗೌಡ ಪಾಟೀಲ ಅವರು, ಕರೊನಾ ವೈರೆಸ್ ತಡೆಗಟ್ಟುವ ಸಲುವಾಗಿ ಮೃಡಗಿರಿ ಸಹಕಾರ ಸಕ್ಕರೆ ಕಾರ್ಖಾನೆ ಗಂಗಾಪುರ, ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ಮುಂಡರಗಿ, ತಾಲೂಕು ಅಗ್ರಿಕಲ್ಚರಲ್ ಪ್ರೊಡ್ಯುಸ್ ಕೋ-ಆಪ್ ಮಾರ್ಕೆಟಿಂಗ್ ಸೊಸೈಟಿ ಲಿ. ಮುಂಡರಗಿ ಮತ್ತು ಬಿದರಹಳ್ಳಿ, ಹಾರೋಗೇರಿ, ಬಾಗೇವಾಡಿ, ಡೋಣಿ, ಡಂಬಳ, ಶಿಂಗಟಾಲೂರ, ಹಿರೇವಡ್ಡಟ್ಟಿ, ಪೇಠಾಲೂರ, ಕಲಕೇರಿ, ಬರದೂರ, ಬೀಡನಾಳ, ಆಲೂರ, ವೆಂಕಟಾಪುರ, ಶಿರೂರ ಹಾಗೂ ಮುಂಡರಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ದ ಸಹಕಾರದಲ್ಲಿ 2.25 ಲಕ್ಷ ರೂ.ದೇಣಿಗೆ ಸಂಗ್ರಹಿಸಿ ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

EndFragment