ಬೇಲೂರು: ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಮೇಲೆ ಜೇನುಹುಳುಗಳು ದಾಳಿ ನಡೆಸಿದ ಪರಿಣಾಮ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ.
ತಾಲೂಕಿನ ಬಿಕ್ಕೋಡು ಹೋಬಳಿ ತಗರೆ ಗ್ರಾಮದ ಕುಮಾರ ಪ್ರೌಢಶಾಲೆಯಲ್ಲಿ ಪ್ರತಿನಿತ್ಯದಂತೆ ಮಂಗಳವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿ ಆರಂಭಿಸಲಾಗಿತ್ತು. ವಿದ್ಯಾರ್ಥಿಗಳು ಶಾಲೆಯ ಕೊಠಡಿಗೆ ಆಗಮಿಸಿದಾಗ ಕಾಡು ಜೇನುಹುಳುಗಳು ದಾಳಿ ನಡೆಸಿ ಕಚ್ಚಿದ ಪರಿಣಾಮ 5 ವಿದ್ಯಾರ್ಥಿಗಳು ಗಾಯಗೊಂಡರು. ಕೂಡಲೇ ಮುಖ್ಯ ಶಿಕ್ಷಕ ಗಣೇಶ್ ಹಾಗೂ ಇತರ ಶಿಕ್ಷಕರು ವಿದ್ಯಾರ್ಥಿಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿದರು.
ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ತಹಸೀಲ್ದಾರ್ ಎಂ.ಮಮತಾ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ತಗರೆ ಕುಮಾರ ಪ್ರೌಢಶಾಲೆ ಮುಖ್ಯ ಶಿಕ್ಷಕ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಶಾಲೆಯ ಹೊರ ಭಾಗದಲ್ಲಿ ಜೇನು ಹುಳುಗಳು ಗೂಡು ಕಟ್ಟಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ವಿದ್ಯಾರ್ಥಿಗಳು ಕೊಠಡಿಯೊಳಗೆ ಬಂದ ತಕ್ಷಣ ಕೆಲವರಿಗೆ ಜೇನುಹುಳುಗಳು ಕಚ್ಚಿದ್ದರಿಂದ ಕೂಡಲೇ ಅವರನ್ನು ಬೇಲೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದೆವು. ಮಕ್ಕಳು ಚೇತರಿಸಿಕೊಂಡಿದ್ದರಿಂದ ಅವರನ್ನು ಮನೆಗೆ ಕಳುಹಿಸಿದ್ದೇವೆ ಎಂದರು.