ಜಿಲ್ಲೆ

ಶಾಲಾ ಪ್ರವಾಸದ ವೇಳೆ ಬಸ್ ಚಾಲನೆ ಮಾಡಿದ್ದ ಶಿಕ್ಷಕ ಅಮಾನತ್ತು

ಎ.ಎಸ್.ಮಣಿಕಂಠ

*ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಆದೇಶ

ಚಾಮರಾಜನಗರ :ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರವಾಸಕ್ಕೆ ಬಳಸಿದ್ದ ಬಸ್ಸನ್ನು ಚಾಲನೆ ಮಾಡಿದ್ದ ಶಿಕ್ಷಕನನ್ನು ಅಮಾನತ್ತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಆದೇಶ ಹೊರಡಿಸಿದ್ದಾರೆ.

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ವೀರಭದ್ರಸ್ವಾಮಿ ಎಂಬುವವರೇ ಅಮಾನತ್ತುಗೊಂಡವರು. ಇವರು ಡಿ.28 ರಿಂದ 31 ವರೆಗೆ ಆಯೋಜಿಸಿದ್ದ 4 ದಿನಗಳ ಶೈಕ್ಷಣಿಕ ಪ್ರವಾಸದ ವೇಳೆಯಲ್ಲಿ ಪ್ರವಾಸಕ್ಕೆ ಬಳಸಿದ್ದ ಬಸ್ಸನ್ನು ಚಾಲನೆ ಮಾಡಿದ್ದರು. ವಿದ್ಯಾರ್ಥಿಗಳು ಅದನ್ನು ವಿಡಿಯೋ ಚಿತ್ರೀಕರಣವನ್ನು ಮಾಡಿದ್ದರು. ಈ ವಿಡಿಯೋ ತುಣುಕುಗಳು ಸಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು.

ಈ ಸಂಬಂಧ ಕನ್ನಡ ಕದಂಬ ಸೇನೆ ವತಿಯಿಂದ ಜ.7 ರಂದು ಶೈಕ್ಷಣಿಕ ಪ್ರವಾಸದಲ್ಲಿ ಬಸ್ ಚಾಲನೆ ಮಾಡಿದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿತ್ತು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುಂಬಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕ ವೀರಭದ್ರಸ್ವಾಮಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿತ್ತು. ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಬಿಇಓ ವರದಿಯನ್ನು ಆಧರಿಸಿ ಇಲಾಖೆಯ ವಿಚಾರಣೆಯನ್ನು ಬಾಕಿ ಇರಿಸಿ ಶಿಕ್ಷಕ ವೀರಭದ್ರಸ್ವಾಮಿ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ.