ಜಿಲ್ಲೆ

ಶಾಲಾ ಚಟುವಟಿಕೆ ಇಂದು ಆರಂಭ

ಮೈಸೂರು: ಜಿಲ್ಲೆಯಾದ್ಯಂತ ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಿವೆ. ಈಗಾಗಲೇ ಕೆಲ ಖಾಸಗಿ ಶಾಲೆಗಳು ಆರಂಭಗೊಂಡಿದ್ದರೂ ಅಧಿಕೃತವಾಗಿ ಸರ್ಕಾರಿ, ಅನುದಾನಿತ ಶಾಲೆಗಳು ಕಾರ್ಯಾರಂಭ ಮಾಡಲಿವೆ.
2023-24ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸಿದ್ಧತೆ ಆರಂಭಿಸಲಿವೆ. ಮೇ 30ರಂದು ಪೂರ್ವಭಾವಿ ಸಭೆ ನಡೆಸಿ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಲಾಗುವುದು. ಮೇ 31ರಂದು ಶಾಲೆಗಳನ್ನು ತಳಿರು ತೋರಣದಿಂದ ಶೃಂಗರಿಸಿ ಮಕ್ಕಳನ್ನು ಸ್ವಾಗತಿಸಲು ಅಣಿ ಆಗಬೇಕಿದೆ.
ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ.98ರಷ್ಟು ಪಠ್ಯಪುಸ್ತಕಗಳನ್ನು ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ಶಾಲಾ ಆರಂಭದ ದಿನದಿಂದಲೇ ಮಕ್ಕಳು, ಸಮವಸ್ತ್ರ, ಪಠ್ಯಪುಸ್ತಕದೊಂದಿಗೆ ಶಾಲೆಗೆ ಹಾಜರಾಗಬಹುದಾಗಿದೆ.
‘ಗುಣಾತ್ಮಕ ಶೈಕ್ಷಣಿಕ ವರ್ಷ’ ಎಂದು ಘೋಷಣೆ ಮಾಡಿ, ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಸಿದ್ಧತೆ, ಪೂರ್ವಭಾವಿ ಸಭೆ ಬಳಿಕ ಮೇ 31ರಂದು ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಿ ಮೆರವಣಿಗೆ ಮೂಲಕ ಮಕ್ಕಳನ್ನು ಕರೆತರಬೇಕು, ಹೂ, ಸಿಹಿ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಬೇಕಿದೆ.
ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕದಿಂದ ಪ್ರೌಢಶಾಲೆವರೆಗೆ ಒಟ್ಟು 3,446 ಶಾಲೆಗಳಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಾಗಿ ಸಿದ್ಧತೆ ಪರಿಶೀಲಿಸಬೇಕು, ಸರ್ಕಾರ ಹಾಗೂ ಇಲಾಖೆ ನೀಡುವ ಸುರಕ್ಷತಾ ಕ್ರಮಗಳ ಪಾಲನೆ ಮಾಡಬೇಕು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಮುಖ್ಯಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.
ಬೆಳಗ್ಗೆ 10ರಿಂದ ಸಂಜೆ 4.20ರವರೆಗೆ ಶಾಲಾ ಸಮಯಕ್ಕೆ ಅನುಗುಣವಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಹಿಂದಿನ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸಿ ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ, ಬಯಸಿದಲ್ಲಿ ವರ್ಗಾವಣೆ ಪತ್ರ ನೀಡಬೇಕು.
ಆರೋಗ್ಯ ಇಲಾಖೆ ಸಹಕಾರ ಪಡೆದು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಇಲ್ಲವೇ ಗ್ರಾಮ ಪಂಚಾಯಿತಿಯಿಂದ ಶಾಲಾ ಸ್ವಚ್ಛತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಲಾ ಆವರಣ, ಕೊಠಡಿಗಳು, ಶೌಚ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.
ಶಾಲೆ ಆರಂಭದ ದಿನ ಎಲ್ಲ ಮಕ್ಕಳಿಗೆ ಪೂರೈಕೆಯಾಗಿರುವ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಬೇಕು, ಸಹ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಅಕ್ಷರ ದಾಸೋಹದ ಕೊಠಡಿ, ಪಾತ್ರೆಗಳು, ನೀರಿನ ಟ್ಯಾಂಕ್, ಸಂಪು, ದವನ ಧಾನ್ಯಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸಬೇಕು. ಶಾಲಾ ಆರಂಭದ ದಿನ ಮಧ್ಯಾಹ್ನ ಊಟದ ಜತೆಗೆ ಸಿಹಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ದಾಖಲಾತಿಗೆ ವಿಶೇಷ ಆಂದೋಲನ
ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಈಗಾಗಲೇ ವಿಶೇಷ ಆಂದೋಲನ ನಡೆಸಲಾಗಿದೆ. ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳು ಹಾಗೂ ಪಾಲಕರನ್ನು ಮನವೊಲಿಸಿ ಶಾಲೆಗೆ ದಾಖಲಿಸಬೇಕು. ಶಾಲೆ ಬಿಟ್ಟ ಮಕ್ಕಳು ಇದ್ದರೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಮರಳಿ ಶಾಲೆಗೆ ದಾಖಲಿಸಿ ಮುಖ್ಯವಾಹಿನಿಗೆ ತರಬೇಕು.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್‌ಗಳನ್ನು ನೀಡುವ ಮೂಲಕ ಸಾರ್ವಜನಿಕರ ಮನವೊಲಿಸಬೇಕು, ದಿನಪತ್ರಿಕೆ, ರೇಡಿಯೋ, ಸಮೂಹ ಮಾಧ್ಯಮದ ಮೂಲಕ ಶಾಲಾ ಆರಂಭದ ಕುರಿತು ಮಾಹಿತಿ ನೀಡುವಂತೆ ಆಯಾ ಶಾಲೆಗಳಿಗೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.