ಬಾಗಲಕೋಟೆ: ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದಲ್ಲಿರುವ ಉನ್ನತಿಕರಿಸಿದ ಸರಕಾರಿ ಪ್ರೌಢಶಾಲೆಯ 10 ಕೊಠಡಿಗಳ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.
ಮಂಗಳವಾರ ಅಕ್ಕಿಮರಡಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಮಗಾರಿ ವೀಕ್ಷಣೆ ಮಾಡಿ ಗುಣಮಟ್ಟದಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ ಅವರು ಸರಕಾರಿ ಪ್ರೌಢಶಾಲಾ ಮಕ್ಕಳೊಂದಿಗೆ ಬಿಸಿಊಟ ಸೇವನೆ ಮಾಡಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿ, ಮಕ್ಕಳಿಗೆ ನೀಡುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಕಾಪಾಡಿಕೊಳ್ಳಲು ಸೂಚಿಸಿದರು. ಸ್ವಚ್ಛತೆಗೆ ಹೆಚ್ಚಿನ ಮಹತ್ವಕೊಟ್ಟು ಕಲಿಕಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಕೊಳ್ಳಲು ತಿಳಿಸಿದರು.
ಕೇಸರಕೊಪ್ಪದಲ್ಲಿರುವ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಿರ್ಜಿ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆಯ ಎರಡು ಕೊಠಡಿ ನಿರ್ಮಾಣ ಕಾಮಗಾರಿ, ಉತ್ತೂರ ಪ್ರಾಥಮಿಕ ಆರೋಗ್ಯ ಕೇಂದ್ರ ಭೇಟಿ, ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವಲಯ ಸಭೆ ನಡೆಸಿದರು.
ಮೇಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈಗೊಂಡ ದುರಸ್ತಿ ಕಾಮಗಾರಿ ವೀಕ್ಷಣೆ ಮಾಡಿ ನಿಂಗಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಬಿಸಿ ಊಟ ವೀಕ್ಷಣೆ ಮಾಡಿದರು. ದಾದನಟ್ಟಿ ಗ್ರಾಮ ಪಂಚಾಯತ ಕಾರ್ಯಾಲಯ, ಅಂಗವನಾಡಿ ಕೇಂದ್ರ 67ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾದನಟ್ಟಿ ಜಲ ಸಂರಕ್ಷಣ ಘಟಕದ ಕಾಮಗಾರಿ, ಕೆರೆ ಜೀರ್ಣೋದ್ದಾರೆ ಕಾಮಗಾರಿ, ಲೋಕಾಪೂರ ಬಾಲಕರ ಪೋಸ್ಟ ಮೆಟ್ರಿಕ್ ವಸತಿ ನಿಲಯದ ಕಾಮಗಾರಿ, ರೈತ ಸಂಪರ್ಕ ಕೇಂದ್ರದಲ್ಲಿ ಪೇವಸ್ ಅಳವಡಿಕೆ ಹಾಗೂ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಕಾಮಗಾರಿ ಪರಿಶೀಲನೆ ಮಾಡಿದರು.
ಭೇಟಿ ವೇಳೆಯಲ್ಲಿ ಮುಧೋಳ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾರ್ಯಪಾಲ ಅಭಿಯಂತರ ಆಕಾಶ ವಂದೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಬಿ.ಚೆಲುವಯ್ಯ, ಪಂಚಾಯತ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ಎಂ.ಐ.ಅಂಬಿಗೇರ ಸೇರಿದಂತೆ ಇತರರು ಇದ್ದರು.