ಕಿಕ್ಕೇರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಅನ್ನು ತಾಲೂಕಿನಲ್ಲಿಯೇ ಮಾದರಿಯಾಗಿ ಮಾಡಲು ಸಹಕರಿಸುವುದಾಗಿ ಎಸ್‌ಡಿಎಂಸಿ ನೂತನ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.
ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ದೇಗುಲವಿದ್ದಂತೆ. ಇದರ ಪಾವಿತ್ರ್ಯ ಕಾಪಾಡಲು ಮುಂದಾಗುವೆ ಎಂದರು.
ತಾಲೂಕಿನಲ್ಲಿಯೇ ಕೆಪಿಎಸ್ ಶಾಲೆ ದೊಡ್ಡದಾಗಿದೆ. ಬಡವರು, ಕಾರ್ಮಿಕರ ಸುಮಾರು 1600 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ಪ್ರತಿಭೆಗೆ ಕೊರತೆ ಇಲ್ಲ ಎಂದು ಹೇಳಿದರು.
ಶಾಲೆಯಲ್ಲಿ ಉತ್ತಮ ಪರಿಸರ, ವಾತಾವರಣ ಕಲ್ಪಿಸಲು ಶಿಕ್ಷಕರು ಮುಂದಾಗಬೇಕು. ಪಾಲಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಆಗಿಂದಾಗ್ಗೆ ಸಭೆ ನಡೆಸಬೇಕು. ಜತೆಗೆ, ಉತ್ತಮ ಕ್ರೀಡಾಂಗಣವಿದ್ದು, ಮಕ್ಕಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ವಿನೋದ್‌ಸಿಂಗ್ ಮಾತನಾಡಿ, ಶಾಲೆ, ಕಾಲೇಜಿನಲ್ಲಿ ಶಿಕ್ಷಕರ ಕೊರತೆ ಇದ್ದು, ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅಗತ್ಯ ಕ್ರಮ ತ್ವರಿತವಾಗಿ ಆಗಬೇಕಿದೆ ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸೇರಿ ಗಿಡ ನೆಟ್ಟು ಪರಿಸರ ಅರಿವು ಮೂಡಿಸಲಾಯಿತು.
ಉಪಪ್ರಾಂಶುಪಾಲ ಬಸವರಾಜಪ್ಪ, ಗ್ರಾಪಂ ಮಾಜಿ ಸದಸ್ಯ ಕಾಯಿ ಮಂಜೇಗೌಡ, ಉಪಾಧ್ಯಕ್ಷ ಬಾಲಚಂದ್ರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್, ಮುಖಂಡ ಶಿವರಾಮು, ದಿನೇಶ್, ಬಾಬು, ರೇವಣ್ಣ, ಸುರೇಶ್, ಹೇಮಂತ್, ಅಶೋಕ್, ಉಪನ್ಯಾಸಕ, ಶಿಕ್ಷಕ ವೃಂದದವರು ಹಾಜರಿದ್ದರು.