ಚಿಕ್ಕಮಗಳೂರು ತಾಪಂ ಸಭಾಂಗಣದಲ್ಲಿ ಜಿಪಂ ಉಪಕಾರ್ಯದರ್ಶಿ ಶಂಕರ ಕೊರವರ ಅಧ್ಯಕ್ಷತೆಯಲ್ಲಿ ತಾಪಂ ಸಾಮಾನ್ಯ ಸಭೆ ನಡೆಯಿತು. ವಿಜಯ್‌ ಕುಮಾರ್‌ ಮತ್ತಿತರರಿದ್ದರು. 
ಜಿಲ್ಲೆ

ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ

ಚಿಕ್ಕಮಗಳೂರು: ತಾಲೂಕಿನಲ್ಲಿ ಸೋರುತ್ತಿರುವ ಶಾಲಾ ಕೊಠಡಿಗಳ ದುರಸ್ಥಿ ಹಾಗೂ ಎಲ್ಲಾ ಶಾಲಾ ಕಟ್ಟಡಗಳು ಸುಭದ್ರವಾಗಿವೆ ಎಂಬ ಬಗ್ಗೆ ಪಟ್ಟಿಮಾಡಿ ಪರಿಶೀಲಿಸಿ ವರದಿ ಕೊಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಂಕರ್ ಕೊರವ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಅಂಬೇಡ್ಕರ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಇಲಾಖೆಯಲ್ಲಿ ಕಾಲ ಕಾಲಕ್ಕೆ ರಸಗೊಬ್ಬರ, ಬಿತ್ತನೆ ಬೀಜ ಮುಂತಾದ ರೈತರಿಗೆ ಅಗತ್ಯವಾಗಿರುವ ವಸ್ತುಗಳನ್ನು ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ತಾಲೂಕಿನ ಕುಡಿಯುವ ನೀರಿನ ಘಟಕಗಳಿಗೆ ಮೆಸ್ಕಾಂ ಇಲಾಖೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಹಾಗೂ ಗ್ರಾ.ಪಂ ವ್ಯಾಪ್ತಿಯ ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ವರದಿ ನೀಡಬೇಕು ಎಂದು ತಿಳಿಸಿದರು.

ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯ ಶಾಲಾ ಕೊಠಡಿಗಳನ್ನು ನವೀಕರಣಗೊಳಿಸುವ ಸಂಬಂಧ ಚರ್ಚಿಸಲಾಗಿದೆ. ಶಾಲಾ ಕಟ್ಟಡ ದುರಸ್ಥಿಗೆ ತಾಪಂ ಅನುದಾನ ಕೊಡುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮಳೆಗಾಲ ಪ್ರಾರಂಭವಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಆದ್ಯತೆ ಮೇಲೆ ಏನು ಕ್ರಮವಹಿಸಬೇಕೆಂಬ ಕುರಿತು ಎನ್‌ಆರ್‌ಇಜಿಎಗೆ ಸಂಬಂಧಿಸಿದ ಇಲಾಖೆಗಳ ಸೆಲೆಕ್ಷನ್ ಸೇರಿದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮೆಸ್ಕಾಂ ಇಲಾಖೆ ತಾಲ್ಲೂಕಿನ ಕುಡಿಯುವ ನೀರಿನ ಘಟಕಗಳಿಗೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಸರಬರಾಜಾಗುತ್ತಿರುವ ಆಹಾರ ಪೊಟ್ಟಣಗಳ ಮೇಲೆ ನಮೂದಾಗಿರುವ ಅವಧಿಯನ್ನು ತಪಾಸಣೆ ಮಾಡಿ ಕ್ರಮವಹಿಸುವಂತೆ ತಿಳಿಸಲಾಯಿತು ಎಂದರು.

ಹಿಂದಿನ ತಾಪಂ ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಸೂಚನೆ ಪತ್ರ ನೀಡಲಾಗಿದ್ದು, ಇಂದು ನಡೆದ ಸಾಮಾನ್ಯ ಸಭೆಗೆ ಬಹುತೇಕ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿ ವರದಿ ನೀಡಿದ್ದಾರೆ ಎಂದು ಹೇಳಿದರು.