ಜಿಲ್ಲೆ

ಶಾಲಾ ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಿ

ವಿರಾಜಪೇಟೆ: ಕೊಯನಾಡು ಬಳಿ ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗದಲ್ಲಿ ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕ.ಎಸ್.ಪೊನ್ನಣ್ಣ ನಿರ್ದೇಶನ ನೀಡಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಮಾರ್ಚ್ ಅಂತ್ಯದವರೆಗಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಶಾಸಕರು, ಕೊಯನಾಡು ಬಳಿ ಬರೆ ಕುಸಿತದಿಂದ ಶಾಲಾ ಕಟ್ಟಡ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು, ಜಿಲ್ಲಾಡಳಿತ ವತಿಯಿಂದ ಜಾಗ ಗುರುತಿಸಲಾಗಿದೆ. ಆದರೆ ಅರಣ್ಯ ಇಲಾಖೆಯಿಂದ ಒಪ್ಪಿಗೆಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಂದಾಯ ಇಲಾಖೆಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ವಾರ ಮುಂಗಾರು ಆರಂಭವಾಗುತ್ತಿದ್ದು, ಶಾಲಾ ಕಟ್ಟಡಗಳ ಸುಸ್ಥಿತಿ, ಸುತ್ತುಗೋಡೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು. ಲೋಕೋಪಯೋಗಿ, ಪಂಚಾಯತ್‌ರಾಜ್ ಹಾಗೂ ಕೆಆರ್‌ಐಡಿಎಲ್, ಪಿಎಂಜಿಎಸ್‌ವೈ ಸೇರಿದಂತೆ ವಿವಿಧ ಎಂಜಿನಿಯರಿಂಗ್ ಇಲಾಖೆಗಳು ರಸ್ತೆ, ಸೇತುವೆ ಮತ್ತಿತರ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಂತೆ ಅವರು ನಿರ್ದೇಶನ ನೀಡಿದರು.

ವಿದ್ಯುತ್ ಉಪ ಘಟಕಗಳಲ್ಲಿ ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ಪಡೆದರು. ಭಾಗಮಂಡಲ ಬಳಿಯ ತಣ್ಣಿಮಾನಿ ಗ್ರಾಮದ ಬಳಿ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು. ಸಮಾಜ ಕಲ್ಯಾಣ, ಸಹಕಾರ, ಆಹಾರ, ಕೆಎಸ್‌ಆರ್‌ಟಿಸಿ, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ಮಿಕ ಇಲಾಖೆ, ಕೃಷಿ ಮತ್ತಿತರ ಇಲಾಖೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳೇಮಾಡ ಪ್ರಶಾಂತ್, ಜಾನ್ಸನ್, ಮಂದ್ರೀರ ಮೋಹನ್, ಕೆಡಿಪಿ ಸದಸ್ಯರಾದ ಟಿ.ಕೆ.ಅಬ್ದುಲ್, ರೇಖಾ, ಪೊನ್ನಕ್ಕಿ, ಶಶಿಧರನ್, ವಿ.ಟಿ.ವಾಸು, ಅಜಿತ್ ಅಯ್ಯಪ್ಪ, ರಫಿಕ್, ಪ್ರಶಾಂತ್ ಉತ್ತಪ್ಪ, ಭರತ್ ಪಿ.ಎಸ್., ಎಚ್.ಪಿ.ಗಣೇಶ್, ಮರ್ವಿನ್ ಲೋಬೋ, ಎಂ.ವಿ.ಕಿರಣ್, ರೈನಾ ಕಾರ್ಯಪ್ಪ, ತಿಲಕ ಸುಬ್ರಾಯ, ಕುಶಾಲಪ್ಪ ಅವರು ವೈದ್ಯರ ನೇಮಕಾತಿ, ಕುಡಿಯುವ ನೀರು ಕಾಮಗಾರಿ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಶಾಸಕರ ಗಮನಕ್ಕೆ ತಂದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಕುಡಿಯುವ ನೀರು ಯೋಜನೆ ಜಲಜೀವನ್ ಮಿಷನ್, ಪಂಚಾಯತ್ ರಾಜ್ ಇಲಾಖೆಯಡಿ ರಸ್ತೆಗಳ ಅಭಿವೃದ್ಧಿ ಮತ್ತಿತರ ಸಂಬಂಧ ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬೀ, ತಾ.ಪಂ.ಇಒ ಅಪ್ಪಣ್ಣ, ಶೇಖರ್, ತಹಸೀಲ್ದಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.