ಜಿಲ್ಲೆ

ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಭೂಮಿ ಪೂಜೆ

Hassan - Mohan Kanthur

ಹಾಸನ: ನಗರದ ಆಡುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಶಾಸಕ ಸ್ವರೂಪ್ ಪ್ರಕಾಶ್ ಭೂಮಿ ಪೂಜೆ ಮಾಡುವ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಆಡುವಳ್ಳಿ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಇದ್ದು, ದುರಸ್ತಿ ಹಂತದಲ್ಲಿದೆ. ಇಲ್ಲಿ ಹಲವು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.

5 ಲಕ್ಷ ಶಾಸಕರ ಅನುದಾನ ಹಾಗೂ 5 ಲಕ್ಷ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳೇಕು.ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಮಳೆಗಾಲದಲ್ಲಿ ಆಡುವಳ್ಳಿ ಶಾಲೆ ಗೋಡೆ ಕುಸಿದು ಅವಘಡ ಸಂಭವಿಸಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿ ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಸ್ಥಳೀಯರ ಮನವಿ ಮೇರೆಗೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯಕ್ಕೆ ಸಿಎಸ್‌ಆರ್ ಫಂಡ್ ಬಳಸಿ ದುರಸ್ತಿ ಕಾರ್ಯ ಪ್ರಾರಂಭಿಸಬೇಕು. ಸರ್ಕಾರಿ ಶಾಲೆಗಳ ಉಳಿವು ಜಿಲ್ಲಾಡಳಿತ ಹಾಗೂ ಸರ್ಕಾರದ ಹಾಗೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಎರಡನೇ ವಾರ್ಡಿನ ಸದಸ್ಯ ಮಂಜುನಾಥ್, ನಾಲ್ಕನೇ ವಾರ್ಡ್‌ನ ಸದಸ್ಯ ವಾಸು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ,ಮುಖಂಡರಾದ ಭಾನು ಪಟೇಲ್, ಸುನಿಲ್, ಯೋಗೇಶ್, ವೆಂಕಟೇಶ್, ಇತರರು ಇದ್ದರು.