ಜಿಲ್ಲೆ

ಶಾಲಾ ಕಟ್ಟಡ ಒಡೆದು ನಿವೇಶನಕ್ಕೆ ದಾರಿ ನಿರ್ಮಾಣ

ರಾಜಣ್ಣ

ಕೆ.ಆರ್.ನಗರ: ಶಿಕ್ಷಣ ಇಲಾಖೆಗೆ ಸೇರಿದ ಶಾಲಾ ಕಟ್ಟಡವನ್ನು ಒಡೆದು ಖಾಸಗಿ ವ್ಯಕ್ತಿ ತನ್ನ ನಿವೇಶನಕ್ಕೆ ದಾರಿ ನಿರ್ಮಾಣ ಮಾಡಿಕೊಂಡ ಸಂಬಂಧ ಪಟ್ಟಣದ ನಾಗರಿಕರು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರೃ ಪೂರ್ವದಲ್ಲಿ ಸಾಲಿಗ್ರಾಮದಲ್ಲಿ ಹಿರಿಯರು ಶಿಕ್ಷಣಕ್ಕಾಗಿ ದಾನ ನೀಡಿದ್ದ ಜಾಗವನ್ನು ಇಲಾಖೆಯು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳು ಶಿಥಿಲವಾಗಿ ಪಾಳು ಬಿದ್ದಿವೆ. ಶಿಕ್ಷಣ ಇಲಾಖೆ ತನಗೆ ಸೇರಿದ ಆಸ್ತಿ ರಕ್ಷಣೆ ಮಾಡುತ್ತಿಲ್ಲ. ಹೀಗಾಗಿ ಕಟ್ಟಡಗಳು ಅನೈತಿಕ ಚಟುವಟಿಕೆ ತಾಣವಾಗಿವೆ. ಅಲ್ಲದೆ ಖಾಸಗಿ ವ್ಯಕ್ತಿಗಳು ಶಿಕ್ಷಣ ಇಲಾಖೆಗೆ ಸೇರಿದ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಹಾಡಹಗಲೇ ಖಾಸಗಿ ವ್ಯಕ್ತಿಯೊಬ್ಬ ಸರ್ಕಾರಿ ಶಾಲಾ ಕಟ್ಟಡವನ್ನು ಒಡೆದು ಹಾಕಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇರುವ ಉಳಿದ ಕಟ್ಟಡಗಳು ದುರ್ಬಳಕೆ ಆಗುತ್ತಿದ್ದರೂ ಆ ಕಟ್ಟಡಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಶಾಲಾ ಕಟ್ಟಡ ಒಡೆದಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಣ ಇಲಾಖೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ತಂದು ಹಾಕಿರುವ ವಸ್ತುಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಬಿಇಒ ಸಮಜಾಯಿಷಿ: ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರು, ಶಾಲಾ ಕಟ್ಟಡವನ್ನು ಒಡೆದಿರುವ ವ್ಯಕ್ತಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಲಿಗ್ರಾಮದಲ್ಲಿ ನಮ್ಮ ಇಲಾಖೆಗೆ ಸೇರಿದ 3.16 ಎಕರೆ ಆಸ್ತಿಯನ್ನು ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.

ಪ್ರಸ್ತುತ ಈ ಆವರಣದಲ್ಲಿರುವ ಶಾಲಾ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. ಕೋವಿಡ್ ನಂತರ ಬೇರೆ ಸ್ಥಳಕ್ಕೆ ಶಾಲೆಗಳನ್ನು ಸ್ಥಳಾಂತರಿಸಲಾಗಿದೆ. ಹೀಗಾಗಿ ಇಲ್ಲಿರುವ ಕಟ್ಟಡಗಳು ಬಳಕೆಯಾಗುತ್ತಿಲ್ಲ. ನಮ್ಮ ಇಲಾಖೆ ದಾಖಲೆಯ ಪ್ರಕಾರ 3.16 ಎಕರೆ ಜಾಗ ಇಲ್ಲಿದ್ದು, ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಾ.ರಾ.ನಂದೀಶ್ ನೇತೃತ್ವದಲ್ಲಿ ಖಾಸಗಿ ವ್ಯಕ್ತಿ ಒಡೆದು ಹಾಕಿರುವ ಶಾಲಾ ಕಟ್ಟಡ ಹಾಗೂ ಪಾಳು ಬಿದ್ದಿರುವ ಶಾಲಾ ಕಟ್ಟಡಗಳ ಪರಿಶೀಲನೆ ನಡೆಸಿದ ಸಾರ್ವಜನಿಕರು, ಸರ್ಕಾರಿ ಶಾಲೆಗೆ ಸೇರಿದ ಆಸ್ತಿಯನ್ನು ರಕ್ಷಣೆ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.