ಮೂಡಿಗೆರೆ: ಪಟ್ಟಣದ ಮೇಗಳಪೇಟೆಯ ಪಾರ್ವತಿ ಹೈಟ್ಸ್ ಕಟ್ಟಡದಲ್ಲಿರುವ ಶ್ರೀರಾಮ್ ಫೈನಾನ್ಸ್ ಕಚೇರಿಯಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿಹೊತ್ತಿಕೊಂಡು ದಾಖಲೆಗಳು ಸುಟ್ಟು ಭಸ್ಮವಾಗಿವೆ.
ಮಂಗಳವಾರ ರಾತ್ರಿ ಸುಮಾರು 12.20ಕ್ಕೆ ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ ಶಬ್ದ ಮತ್ತು ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ಕಟ್ಟಡದ ಮಾಲೀಕರು ಮತ್ತು ಅಗ್ನಿಶಾಮಕ ದಳದ ಕಚೇರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ವಾಹನ ಬರುವ ಹೊತ್ತಿಗಾಗಲೇ ಕಚೇರಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗದಿದ್ದಾಗ ಚಿಕ್ಕಮಗಳೂರಿನ ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಲಾಯಿತು. ಬಳಿಕ ಅಲ್ಲಿನ ವಾಹನದೊಂದಿಗೆ ಸಿಬ್ಬಂದಿ ಧಾವಿಸಿದ್ದು, ಅಗ್ನಿಶಾಮಕ ದಳದ 2 ವಾಹನದಲ್ಲಿ ನೀರಾಯಿಸುವ ಮೂಲಕ ಭಾರಿ ಪ್ರಯತ್ನಪಟ್ಟ ನಂತರ ಬೆಳಗಿನ ಜಾವ 3 ಗಂಟೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸುರಕ್ಷತೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.
ಶ್ರೀರಾಮ್ ಫೈನಾನ್ಸ್ ಕಚೇರಿಯಲ್ಲಿದ್ದ ಕಡತ, ಪರಿಕರ, ಕಂಪ್ಯೂಟರ್, ಕಿಟಕಿ, ಬಾಗಿಲು, ಫರ್ನಿಚರ್ ಎಲ್ಲವೂ ಸುಟ್ಟು ಕರಕಲಾಗಿವೆ. ಭದ್ರತಾ ಲಾಕರ್‌ನಲ್ಲಿದ್ದ ಹಣ ಮತ್ತು ಚಿನ್ನಾಭರಣ ಸುರಕ್ಷಿತವಾಗಿವೆ. ಅದೇ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿರುವ ಕೆನರಾ ಬ್ಯಾಂಕ್, ವಿವಿಧ ಕಚೇರಿಗಳು, 2ನೇ ಅಂತಸ್ತಿನಲ್ಲಿ ವಾಸದ ಮನೆಗಳಿಗೆ ಹಾನಿ ಉಂಟಾಗಿಲ್ಲ. ಫೈನಾನ್ಸ್ ಕಚೇರಿಗೆ ಬೆಂಕಿ ಆವರಿಸಿಕೊಂಡಿದ್ದನ್ನು ಗಮನಿಸಿದ ಅದೇ ಕಟ್ಟಡದ ನಿವಾಸಿಗಳು ಭಯದಿಂದ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಟ್ಟಡದ ನೆಲ ಮತ್ತು ಗೋಡೆ ಬೆಂಕಿಯ ಶಾಖದಿಂದ ಬಿಸಿಯಾಗಿದ್ದವು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಯುಪಿಎಸ್ ಹೀಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.