ಜಿಲ್ಲೆ

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿದ ಸಜ್ಜು:ಜಿಲ್ಲೆಯಲ್ಲಿ ಒಟ್ಟು 14,99,917 ಮತದಾರರು

ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 10 ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯಲ್ಲಿ 7,49,720 ಪುರುಷ, 7,50,153 ಮಹಿಳೆಯರು ಹಾಗು 44 ಇತರೆ ಮತದಾರರು ಸೇರಿ ಒಟ್ಟು 14,99,917 ಮತದಾರರಿದ್ದಾರೆ. ಈ ಬಾರಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಜಿಲ್ಲೆಯ ಒಟ್ಟು 27,135 ಹೊಸ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಎಸ್.ಅರ್ಚನಾ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1062 ಅಂಗವಿಕಲರು ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಸಿದ್ದರು. ಇವರಲ್ಲಿ 1,031 ಮಂದಿ ಮತ ಚಲಾಯಿಸಿದ್ದಾರೆ. ಹಾಗೆಯೇ 80 ವರ್ಷ ಮೇಲ್ಪಟ್ಟ 3056 ಹಿರಿಯ ನಾಗರಿಕರು ಮನೆಯಿಂದ ಮತದಾನಕ್ಕೆ ಇಚ್ಛೆ ವ್ಯಕ್ತಪಡಿಸಿದ್ದರು. ಇವರಲ್ಲಿ 2874 ಮಂದಿ ಹಕ್ಕು ಚಲಾಯಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 10,910 ಮತಗಟ್ಟೆ ಅಧಿಕಾರಿ ಹಾಗು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೆಯೇ ಪ್ರತಿ ವಿಧಾನಸಭಾ ಕ್ಷೇತ್ರಗಳ 10-12 ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಒಟ್ಟು 223 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6-9 ಫ್ಲೈಯಿಂಗ್ ಸ್ಕಾೃಡ್ ತಂಡ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 83 ತಂಡಗಳು ಕಾರ್ಯ ನಿರ್ವಹಿಸಲಿದೆ. ಏಳೂ ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 2000 ಮತಗಟ್ಟೆ ತೆರೆಯಲಾಗಿದೆ. ಇವುಗಳಲ್ಲಿ 643 ಸೂಕ್ಷ್ಮ ಮತಗಟ್ಟೆಗಳಿದ್ದು, 10 ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. 1007 ಕಡೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತಿದೆ. 460 ಕಡೆ ಸೂಕ್ಷ್ಮ ವೀಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಇಡಿಸಿ ಮತ ಚಲಾವಣೆ ಪ್ರಕ್ರಿಯೆ ಬಿಗಿಗೊಳಿಸಲಾಗಿದೆ. ಬ್ಯಾಲೆಟ್ ಪೇಪರ್ ಪೋಸ್ಟ್ ಮಾಡುವುದನ್ನೂ ಸದ್ಯಕ್ಕೆ ನಿಲ್ಲಿಸಲಾಗಿದೆ. ಒಂದು ಪಕ್ಷದ ಪರ ಕೆಲಸ ಆರೋಪದಡಿ ನಮ್ಮ ಕಚೇರಿಯ ಒಬ್ಬ ಸಿಬ್ಬಂದಿ ಅಮಾನತು ಮಾಡಲಾಗಿದೆ. ಕೆಲ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳ ಪತ್ರ ಬರೆಯಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಕಳೆದ ಎರಡು ತಿಂಗಳಿಂದ ಜಿಲ್ಲಾದ್ಯಂತ ಮತದಾನ ಅರಿವು ಮೂಡಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಶೇ.72 ಕ್ಕಿಂತ ಕಡಿಮೆ ಮತದಾನ ಆಗಿದ್ದು 181 ಮತಗಟ್ಟೆಗಳಲ್ಲಿ ಅರಿವು ಮೂಡಿಸಲಾಗಿದೆ. ಸ್ವೀಪ್ ಸಮಿತಿ ವತಿಯಿಂದ ಬೀದಿನಾಟಕ, ಸೈಕಲ್ ಜಾಥ, ಪಂಜಿನ ಮೆರವಣಿಗೆ, ಕಾಲ್ನಡಿಗೆ ಜಾಥ, ಪ್ಯಾರಾಗ್ಲೈಡಿಂಗ್ ಮೂಲಕವೂ ಮತದಾನ ಜಾಗೃತಿ ಮೂಡಿಸಲಾಗಿದೆ. ಈ ಬಾರಿ ಶೇ.100ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಕಮಿಟಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಾಗೆಯೇ ದಿವ್ಯಾಂಗರು, ಯುವ ಮತದಾರರು ಸೇರಿ ಒಟ್ಟು 47 ವಿಶೇಷ ಮತಗಟ್ಟೆ, 14 ಸಖಿ ಮತಗಟ್ಟೆ ತೆರೆಯಲಾಗಿದೆ ಎಂದು ವಿವರಿಸಿದರು.

1.87 ಕೋಟಿ ನಗದು, 1.19 ಕೋಟಿ ಮೌಲ್ಯದ ಸೀರೆ ವಶ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ 33 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.87 ಕೋಟಿ ರೂ. ಹಣ ಹಾಗು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1.19 ಕೋಟಿ ರೂ. ಮೌಲ್ಯದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈವರೆಗೆ ದಾಖಲೆ ಇಲ್ಲದ 18,729,430 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 29,964 ಲೀಟರ್ ಮದ್ಯ, 1 ಲಕ್ಷ ರೂ. ಮೌಲ್ಯದ ಡ್ರಗ್ಸ್ ಹಾಗು ನಗರದ ಹೊರ ವಲಯದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಸುಮಾರು 1.19 ಕೋಟಿಗೂ ಅಧಿಕ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಂಡು ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸೇರಿ ಒಟ್ಟು 1,433 ಎಫ್‌ಐಆರ್ ದಾಖಲಿಸಲಾಗಿದೆ. ಈವರೆಗೆ 24 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು 23 ಸಿಎಪಿಎಫ್ ತುಕಡಿಗಳು ಬಂದಿವೆ. ಏಳೂ ಕ್ಷೇತ್ರಗಳಿಗೂ ತಲಾ ಒಂದರಂತೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ನಮ್ಮ ಜಿಲ್ಲೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಜತೆಗೆ ಹೊರಗಿನಿಂದ 1700 ಸಿಬ್ಬಂದಿ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.