???????????????????????????????????? 
ಜಿಲ್ಲೆ

ಶಾಂತಿಯುತ ಚುನಾವಣೆಗೆ ಸಹಕಾರ ನೀಡಿ

ಕೆ.ಆರ್.ನಗರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಆರಂಭವಾಗಿದ್ದು, ಸಾರ್ವಜನಿಕರು ಶಾಂತಿಯುತ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ಬಿ.ಎನ್.ನಂದಿನಿ ಮನವಿ ಮಾಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಆಯೋಜಿಸಿದ್ದ ಸ್ಥಳೀಯ ಪೊಲೀಸರು ಮತ್ತು ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿಯುತ ಚುನಾವಣೆಗೆ ಇಲಾಖೆ ಅಗತ್ಯ ಭದ್ರತೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು.

ಈಗಾಗಲೇ ಮೂರು ಸಿಎಎಸ್‌ಎಫ್ ತಂಡಗಳು ಬಂದಿದ್ದು, ಇನ್ನೂ ಎರಡು ತಂಡ ಬರಬೇಕಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಪಟ್ಟಣ ಸೇರಿದಂತೆ ಹಲವು ಕಡೆಯಲ್ಲಿ ಪಥಸಂಚಲನ ಸಾಗಲಿದೆ. ಸಿಎಎಸ್‌ಎಫ್ 3 ತಂಡಗಳಿಂದ 300 ಸಿಬ್ಬಂದಿ ಮತ್ತು 100 ಸ್ಥಳೀಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರು ಶಾಂತಿಯುತವಾಗಿ ಮತದಾನ ಮಾಡುವ ಜತೆಗೆ ಚುನಾವಣಾ ಸಂದರ್ಭದಲ್ಲಿ ಆಯೋಗದ ನಿಯಮ ಮತ್ತು ಸೂಚನೆಗಳನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರಾರಂಭವಾದ ಪಥಸಂಚಲನ ಮೈಸೂರು ರಸ್ತೆ ಮಾರ್ಗವಾಗಿ ಬಜಾರ್ ರಸ್ತೆ, ಆಂಜನೇಯ ಬಡಾವಣೆ, ಸಿ.ಎಂ.ರಸ್ತೆ, ವಾಣಿವಿಲಾಸ ರಸ್ತೆ, ಡಾ.ಬಾಬು ಜಗಜೀವನರಾಮ್ ವೃತ್ತದ ಮೂಲಕ ಮುಸ್ಲಿಂ ಬಡಾವಣೆಗಳಲ್ಲಿ ಸಂಚರಿಸಿತು.

ಡಿವೈಎಸ್‌ಪಿ ಶಿವಕುಮಾರ್, ಪಿಐಗಳಾದ ರೇವಣ್ಣ, ಕೃಷ್ಣರಾಜು, ಪಿಎಸ್‌ಐಗಳಾದ ಪ್ರಸನ್ನ, ಕುಮುದಾ, ಅಪರಾಧ ವಿಭಾಗದ ಪಿಎಸ್‌ಐ ನಾಗೇಶ್, ಎಎಸ್‌ಐ ಗಿರೀಶ್, ಶ್ರೀನಿವಾಸ್ ಇತರರು ಹಾಜರಿದ್ದರು.