ರಾಮನಗರ: ಹಿಜಾಬ್-ಕೇಸರಿ ಶಾಲಿನ ವಿವಾದ ರೇಷ್ಮೆ ನಗರಿ ರಾಮನಗರಕ್ಕೂ ಹಬ್ಬಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶನಿವಾರ ಹಿಂದೂ - ಮುಸ್ಲಿಂ ಸಮುದಾಯದ ಪ್ರಮುಖರ ಶಾಂತಿ ಸಭೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಜಾಬ್-ಕೇಸರಿ ಶಾಲು ಕಾರಣವನ್ನು ಮುಂದಿಟ್ಟುಕೊಂಡು ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಮಾತನಾಡಿ, ಜಿಲ್ಲೆ ಕೋಮುಸೌಹಾರ್ದತೆಗೆ ಹೆಸರಾಗಿದೆ. ಹಿಜಾಬ್ - ಕೇಸರಿ ಶಾಲಿನ ಹೆಸರಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಒಡಕು ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಯಾರು ಸಹ ಮುಂದಾಗದೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ನ್ಯಾಯಾಲಯದ ತೀರ್ಪು ಬರುವವರೆಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಅವರಿವರ ಮೇಲೆ ಆರೋಪ - ಪ್ರತ್ಯಾರೋಪ ಮಾಡುವುದು, ಶಾಂತಿಗೆ ಭಂಗ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.
ಸಮಾಜಘಾತಕರ ಹುಟ್ಟಡಗಿಸುತ್ತೇನೆ: ಸಭೆಯಲ್ಲಿ ಎಲ್ಲ ಸಮುದಾಯದ ಮುಖಂಡರ ಮಾತುಗಳನ್ನು ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಶಾಂತಿಗೆ ಭಂಗ ತರುವಂತಹ ಕೆಲಸಕ್ಕೆ ಯಾರೂ ಕೈ ಹಾಕಬೇಡಿ. ಇಲ್ಲಿ ಎರಡು ಧರ್ಮದವರ ಮಧ್ಯೆ ಸಾಮರಸ್ಯವಿದೆ. ಇದು ಹಾಳಾಗದಂತೆ ನೋಡಿಕೊಳ್ಳಿ ಎಂದರು. ನಾನು ಸಹ ಇದೇ ಜಿಲ್ಲೆಯವನಾಗಿದ್ದು, ಜಿಲ್ಲೆಯ ಬಗ್ಗೆ ಅಭಿಮಾನ ಹೊಂದಿದ್ದೇನೆ. ಹೀಗಾಗಿ ಸಮಾಜಘಾತಕ ಶಕ್ತಿಯನ್ನು ಬೆಳೆಯಲು ಬಿಡುವುದಿಲ್ಲ. ಯಾರು ಜಿಲ್ಲೆಯ ಹೆಸರಿಗೆ ಮಸಿ ಬಳಿಯಬೇಡಿ. ಯಾರಾದರೂ ಹಾಳುಮಾಡುವ ಉದ್ದೇಶದಿಂದ ಕೋಮು ಸಾಮರಸ್ಯಕ್ಕೆ ಬೆಂಕಿ ಇಡಲು ಪ್ರಯತ್ನಿಸಿದರೆ ಅವನು ಯಾಕೆ ನಾನು ಹುಟ್ಟಿದೆ ಅನ್ನುವ ರೀತಿ ಮಾಡುತ್ತೀನಿ. ಎಂತಹದ್ದೆ ಪ್ರಭಾವ ಎದುರಾಗಲಿ ಸಮಾಜಘಾತಕ ಶಕ್ತಿಗಳು ಹುಟ್ಟು ಆಡಗಿಸುತ್ತೇನೆ ಎಂದು ಸಂತೋಷ್ ಬಾಬು ಖಡಕ್ ಸಂದೇಶ ನೀಡಿದರು.
ಜಿಲ್ಲೆಯಲ್ಲಿ ಹಿಂದೂ - ಮುಸ್ಲಿಮರು ಅಣ್ಣ- ತಮ್ಮಂದಿರ ರೀತಿ ಬದುಕುತ್ತಿದ್ದಾರೆ. ಈ ಜಿಲ್ಲೆ ಮೇಲೆ ವಿಶೇಷವಾದ ಪ್ರೀತಿ ಗೌರವ ಇದೆ. ಯಾವನ್ನಾದ್ರೂ ಕೋಮು ಗಲಭೆ ಮಾಡಿದ್ರೆ ಯಾಕೆ ಹುಟ್ಟಿದ್ದೆ , ಯಾಕಾದ್ರೂ ತಪ್ಪು ಮಾಡಿದ್ವಿ ಅಂತಾ ಅನ್ನಿಸಬೇಕು ಆ ರೀತಿ ಮಾಡ್ತೀನಿ. ಧಮ್ ಇದ್ರೆ ಯಾರ ಕೈಲಿ ಹೇಳಿಸ್ತಿರೋ ಹೇಳಿಸಿ, ಅದನ್ನು ನೋಡ್ತೀನಿ. ಇದು ನಮ್ಮ ಜಿಲ್ಲೆ, ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕೆ. ಸಂತೋಷ್ ಬಾಬು, ಎಸ್‌ಪಿ ರಾಮನಗರ