ಜಿಲ್ಲೆ

ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಣೆ

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಬರಲಿರುವ ಬಕ್ರೀದ್ ಹಬ್ಬವನ್ನು ಈ ಹಿಂದಿನಂತೆಯೇ ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶಾಂತಿ ಸಹಬಾಳ್ವೆಯಿಮದ ಜಿಲ್ಲೆಯ ಜನರು ಬದುಕುತ್ತಿದ್ದಾರೆ. ಈ ಬಾರಿಯೂ ಸಹ ಈ ಹಿಂದೆ ನಡೆದುಕೊಂಡ ಬಂದ ಮಾದರಿಯಲ್ಲಿಯೇ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬದ ಆಚರಣೆಯಾಗಲಿ. ಇದಕ್ಕಾಗಿ ಸರ್ವರು ಸಹಕರಿಸಲಿದ್ದಾರೆ ಎಂದರು.

ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ಸ್ವಚ್ಚತೆ, ತ್ಯಾಜ್ಯಗಳ ನಿರ್ವಹಣೆ, ನಿರಂತರ ವಿದ್ಯುತ್, ಇನ್ನಿತರ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಒಳ್ಳೆಯ ವಾತಾವರಣದಲ್ಲಿ ಹಬ್ಬ ಆಚರಣೆಯಾಗಲಿ. ಸಂತೋಷ ಸಂಭ್ರಮದಿಂದ ಹಬ್ಬ ನಡೆಯಲಿ. ಎಲ್ಲ ಮುಖಂಡರು ಎಲ್ಲ ಸಂದರ್ಭಗಳಲ್ಲಿಯೂ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬಂದಿದ್ದಾರೆ. ಇದು ಹೀಗೆಯೇ ಮುಂದುವರೆಯಬೇಕೆಂದು ಹೇಳಿದರು.

ಇದೇ ವೇಳೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಿ. ಸ್ವಚ್ಚತೆಗೆ ವಿಶೇಷ ಗಮನಹರಿಸಿ. ತ್ಯಾಜ್ಯ ವಿಲೇವಾರಿ ಸಕಾಲದಲ್ಲಿ ಪೂರ್ಣವಾಗಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಹಬ್ಬದ ವೇಳೆ ಒದಗಿಸಬೇಕಿರುವ ಸೌಲಭ್ಯಗಳು ಹಾಗೂ ಸೇವೆಗೆ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರು ಸಹೋದರರಂತೆ ಇದ್ದಾರೆ. ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿಯೂ ಬಕ್ರೀದ್ ಹಬ್ಬ ಸಾಂಗವಾಗಿ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಬಂದೋ ಬಸ್ತ್ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಸಭೆಯಲ್ಲಿ ವಿವಿಧ ಕೋಮಿನ ಮುಖಂಡರು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಈ ಹಿಂದೆಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಪರಸ್ಪರ ಸಹಕಾರ ನೀಡಲಾಗುತ್ತಿದೆ. ಈ ಉತ್ತಮ ಬಾಂಧವ್ಯ ನಡೆ ಮುಂದುವರೆಯಲಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿಗಳಾದ ಲಕ್ಷ್ಮಯ್ಯ, ಧಮೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ಪಶುಪಾಲನಾ ಇಲಾಖೆಯ ಉಪನಿರ್ದೆಶಕ ಹನುಮೇಗೌಡ, ಮುಖಂಡರಾದ ಮಹಮ್ಮದ್ ಜಿಯಾವುಲ್ಲಾ, ನಗರಸಭಾ ಸದ್ಯರಾದ ಅಬ್ರಾರ್ ಅಹಮದ್, ಸುರೇಶ್ ವಾಜಪೇಯಿ, ಶಿವಣ್ಣ, ಮಹಮ್ಮದ್ ಜಸೀಂ ಪಾಷ, ಇತರೆ ಮುಖಂಡು, ತಹಶೀಲ್ದಾರರಾದ ಗಿರಿಜಾ, ಬಸವರಾಜು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಎಲ್ಲ ಧರ್ಮದವರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಎಲ್ಲರೂ ಸಹಕರಿಸುತ್ತಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಹಬ್ಬದ ವೇಳೆ ಸ್ವಚ್ಚತೆ, ಕುಡಿಯುವ ನೀರು ಮತ್ತಿತ್ತರ ಸೌಲಭ್ಯಗಳು ಸಮರ್ಪಕವಾಗಿ ಒದಗಿಸಬೇಕು. ಮಹಮ್ಮದ್ ಅಸ್ಗರ್ (ಮುನ್ನಾ), ಚುಡಾ ಅಧ್ಯಕ್ಷ, ಚಾಮರಾಜನಗರ