ಮೈಸೂರು: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಶ್ರಮಿಸಿದವರು. ಈ ದಾರಿಯಲ್ಲೇ ಪಕ್ಷದ ಕಾರ್ಯಕರ್ತರು ಸಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಹೇಳಿದರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜೀವ್‌ಗಾಂಧಿ ಪಂಚಾಯತ್ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಸಂಸ್ಥೆಯಲ್ಲಿ ಶಾಂತಿಪಡೆ ಸ್ಥಾಪನೆಗೆ ಕಾರಣರಾದವರು ರಾಜೀವ್‌ಗಾಂಧಿ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ರಾಜಕೀಯ, ಆರ್ಥಿಕ ಘರ್ಷಣೆಗಳು ಉಂಟಾದಾಗ ನಿಯಂತ್ರಿಸಲು ಶಾಂತಿ ಪಡೆ ಅವಶ್ಯವೆಂದು ಪ್ರತಿಪಾದಿಸಿದರು. ಇದರಿಂದ ಸಂಘರ್ಷದ ಕಾಲದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಸೇನಾ ಪಡೆ ಕಳುಹಿಸಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಶ್ರೀಲಂಕಾದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಿದ್ದರೆ ರಾಜೀವ್ ಗಾಂಧಿ ದುರಂತ ಅಂತ್ಯ ಕಾಣುತ್ತಿರಲಿಲ್ಲ. ಸಿಂಹಳಿಯರು-ತಮಿಳರ ನಡುವೆ ಸಂಘರ್ಷ ಏರ್ಪಟ್ಟಾಗ, ಶ್ರೀಲಂಕಾದ ವಿರುದ್ಧ ಎಲ್‌ಟಿಟಿಇ ಪ್ರಭಾಕರನ್ ಯುದ್ಧಕ್ಕೆ ನಿಂತರು. ಶಾಂತಿ ಪಡೆ ಸ್ಥಾಪನೆಗೆ ಕಾರಣರಾದ ರಾಜೀವ್‌ಗಾಂಧಿ, ಶ್ರೀಲಂಕಾಕ್ಕೆ ಭಾರತೀಯ ಸೇನೆಯನ್ನು ಕಳುಹಿಸಿದ ಪರಿಣಾಮವಾಗಿ ಎಲ್‌ಟಿಟಿಇ ಉಗ್ರರು ರಾಜೀವ್ ಗಾಂಧಿ ಹತ್ಯೆ ಮಾಡಿದರು ಎಂದರು.
ಶಾಂತಿ ಸೌಹಾರ್ದತೆಗಾಗಿ ಶಾಂತಿಪಡೆ ಸ್ಥಾಪಿಸಿದ ರಾಜೀವ್ ಗಾಂಧಿ ಅಥವಾ ಸಂಕಷ್ಟದ ಕಾಲದಲ್ಲೂ ದ್ವೇಷ, ಅಸೂಯೆ ಮುಂದುವರಿಸುವ ಪ್ರಧಾನಿ ನರೇಂದ್ರ ಮೋದಿ ಇಬ್ಬರಲ್ಲಿ ಯಾರು ಗ್ರೇಟ್? ಯಾರು ವಿಶ್ವನಾಯಕ ಎಂಬುದನ್ನು ಜನರು ಅರಿಯಬೇಕು. ಕಾಂಗ್ರೆಸ್ ಯಾವತ್ತೂ ಮಾನವೀಯತೆ ಪರವಾಗಿ ಇದೆ ಎಂದು ಹೇಳಿದರು.
ರಾಜೀವ್‌ಗಾಂಧಿ ಪಂಚಾಯತ್ ರಾಜ್ ಘಟಕದ ಜಿಲ್ಲಾಧ್ಯಕ್ಷ ಬಿ. ಮಲ್ಲೇಶ್ ಕೋಟೆ ಮಾತನಾಡಿ, ಪಕ್ಷದ 17 ಘಟಕಗಳಿಗಿಂತ ಪಂಚಾಯತ್ ರಾಜ್ ಘಟಕ ಶಕ್ತಿಯುತವಾಗಿದೆ. 8 ತಿಂಗಳಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಾಯತ್ ರಾಜ್ ಘಟಕ ಮುಂಚೂಣಿಯಲ್ಲಿರಬೇಕು. ಆ ರೀತಿ ಕೆಲಸ ಮಾಡಬೇಕು. ರಾಜೀವ್‌ಗಾಂಧಿ ಅವರ ಗ್ರಾಮಾಭಿವೃದ್ಧಿ ಕನಸು ನನಸು ಮಾಡಲು ಶ್ರಮಿಸಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ತಿಳಿಸಿದರು.
ಮುಖಂಡರಾದ ಹೆಡತಲೆ ಮಂಜುನಾಥ್, ಗೋವಿಂದಸ್ವಾಮಿ, ಶ್ರೀನಿವಾಸಮೂರ್ತಿ, ಮಂಜುನಾಥ್, ಗುರುಪ್ರಸಾದ್, ನವೀನ್, ಲಕ್ಷ್ಮಣ್, ಡಿ.ಎಂ.ರಾಜು ಮುಂತಾದವರು ಭಾಗವಹಿಸಿದ್ದರು.