ಜಿಲ್ಲೆ

ಶಾಂತಿ ಸಂದೇಶ ಸಾರಿದ ಮಹಾವೀರರು

ಹೊಳೆನರಸೀಪುರ: ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದವರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಆರ್. ಗೋಪಾಲ್ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾವೀರ ಜಯಂತಿ, ಛತ್ರಪತಿ ಶಿವಾಜಿ ಜಯಂತ್ಯುತ್ಸವ, ಜಗದ್ಗುರು ರೇಣುಕಾಚಾರ್ಯರ ಜಯಂತಿ, ಕೈವಾರದ ತಾತಯ್ಯ ಮತ್ತು ಜೇಡರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗವಾನ್ ಮಹಾವೀರರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ವಿಶ್ವಕ್ಕೆ ಶಾಂತಿ ಸಂದೇಶ ಸಾರಿದವರು. ಇವರು ಎಲ್ಲ ಧರ್ಮದವರನ್ನು ಸಮಾನತೆಯಿಂದ ನೋಡುತ್ತಿದ್ದರು. ಅದೇ ರೀತಿ ಜೇಡರ ದಾಸಿಮಯ್ಯ ಮತ್ತು ಕೈವಾರದ ತಾತಯ್ಯ, ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿನ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದವರು. ಸ್ತ್ರೀಯರಿಗೆ ವಿಶೇಷವಾದ ಗೌರವ ಸೂಚಿಸುತ್ತಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಸಮಾಜದ ಏಳಿಗೆಗೆ ದುಡಿದವರು ಎಂದರು.

ಮರಾಠಾ ಸಮಾಜದ ಜೀರೋಜೀ ರಾವ್ ಮಾತನಾಡಿದರು. ತಾಲೂಕು ದಂಡಾಧಿಕಾರಿ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪತಹಸೀಲ್ದಾರ್ ಬಿ.ಎಸ್. ರವಿ, ಶಿರಸ್ತೇದಾರ್ ಲೋಕೇಶ್, ಬಿಇಒ ಕೃಷ್ಣೇಗೌಡ ಪ್ರಭಾರಿ ಸಿಡಿ ಪಿಒ ಭಾಗ್ಯಮ್ಮ ಬಿಸಿ ಎಂ ಇಲಾಖೆಯ ಮಂಜುನಾಥ ಇತರರಿದ್ದರು.