ಬಸವಕಲ್ಯಾಣ: ಕ್ರಿಸ್‌ಮಸ್ ಹಬ್ಬ ಶಾಂತಿ, ಪ್ರೀತಿ ಸಾರುವ ಜತೆಗೆ ಎಲ್ಲ ಧರ್ಮೀಯರನ್ನು ಒಟ್ಟು ಸೇರಿಸುವ ಹಬ್ಬವಾಗಿದೆ ಎಂದು ಕಲಬುರಗಿ ಪ್ರಾಂತ ಧರ್ಮಾಧ್ಯಕ್ಷ ಬಿಷಪ್ ರಾಬರ್ಟ್ ಮೈಕೆಲ್ ಮಿರಂಡಾ ಹೇಳಿದರು.
ನಗರದ ಪರ್ತಾಪುರ ರಸ್ತೆ ಬದಿಯಲ್ಲಿಯ ಸಂತ ಅಂತೋನಿ ಬಾಲ ಕಲ್ಯಾಣ ಆಶ್ರಮದ ಸತ್ಯಾನುಭಾವ ಅಂತರ ಧರ್ಮೀಯ ಸಂಹಾರ್ದತೆ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರಿಸ್‌ಮಸ್ ಹಾಗೂ ಅಂತರ ಧರ್ಮೀಯರ ಸೌಹಾರ್ದ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂತರ ಧರ್ಮೀಯರ ಸೌಹಾರ್ದ ಆಯೋಜಿಸಿರುವಕ್ಕೆ ಸಂತಸ ವ್ಯಕ್ತಪಡಿಸಿ, ಶಾಂತಿ, ನೆಮ್ಮದಿ ನಿಮ್ಮೆಲ್ಲರಿಗಾಗಲಿ ಎಂದು ಶುಭ ಹಾರೈಸಿದರು.
ಸದ್ಭವನಾ ಮಂಚ್ ತಾಲೂಕು ಸಂಚಾಲಕ ಅರ್ಜುನ ಕನಕ ಮಾತನಾಡಿ, ಶಾಂತಿ ಸಹಬಾಳ್ವೆ ಸರ್ವಧರ್ಮ ಸಂದೇಶವಾಗಿದೆ. ಎಲ್ಲರೂ ಶಾಂತಿ-ಸೌರ್ದಾತೆಯಿಂದ ಒಂದಾಗಿ ಬಾಳಬೇಕು ಎಂದು ದಾರ್ಶನಿಕರು ಸಾರಿದ್ದಾರೆ. ಅಣ್ಣ ಬಸವಣ್ಣನವರ ಕಾಯಕ ಭೂಮಿ ಕಲ್ಯಾಣದಲ್ಲಿ ನಾವೆಲ್ಲರೂ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಧರ್ಮಗಳು ಬೇರೆ-ಬೇರೆಯಾದರೂ ನಾವೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಂದಾಗಿ ಬದುಕಬೇಕಾಗಿದೆ ಎಂದರು.
ಬೌದ್ಧ ಧಮ್ಮ ಪ್ರಚಾರಕ ಪೂಜ್ಯ ಮಿಲಿಂದ ಗುರೂಜಿ ಮಾತನಾಡಿ, ಆಧುನಿಕ ಜೀವನ ಶೈಲಿ, ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಶಾಂತಿ-ನೆಮ್ಮದಿ ಅವಶ್ಯಕವಾಗಿದೆ. ಮನುಷ್ಯ ನೆಮ್ಮದಿಯಿಂದ ಜೀವನ ಸಾಗಿಸಿದರೆ ಸಮಾಜ, ದೇಶದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಎಡಿ ದಿಲೀಪಕುಮಾರ ಉತ್ತಮ, ಭಾರತೀಯ ಬೌದ್ಧ ಮಹಾ ಸಭಾ ತಾಲೂಕು ಅಧ್ಯಕ್ಷ ಮನೋಹರ ಮೈಸೆ, ಸದ್ಭಾವನಾ ಮಂಚ್ ಜಿಲ್ಲಾಧ್ಯಕ್ಷ ಗುರುನಾಥ ಗಡ್ಡೆ, ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೇಗಾಂವ, ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಅಸ್ಲಂ ಜನಾಬ್ ಮಾತನಾಡಿದರು.
ಕವಡಿಯಾಳ ಫಾದರ್ ಜಾರ್ಜ್ ಲೋಬೋ ಹಾಗೂ ಹುಲಸೂರಿನ ಫಾದರ್ ಆರೋಗ್ಯದಾಸ, ಫಾದರ್ ಸ್ಟ್ಯಾನಿ ಮುಚಳಂಬ, ಸಿಸ್ಟರ್ ಬೆಟ್ಟಿ, ಸಿಸ್ಟರ್ ಮರೀಯಾ ಮ್ಯಾನೆಜೆಸ್, ನಿವೃತ್ತ ಪ್ರಾಚಾರ್ಯ ಎಂ.ಎಂ.ತಂಬಾಕೆ, ಶಂಕರರಾವ ಜಮಾದಾರ, ಬಂಡೆಪ್ಪ ಮೇತ್ರೆ, ಮೀರ್ ತಹಸೀನ್ ಅಲಿ ಜಮಾದಾರ್, ಚಂದ್ರಕಾಂತ ಮೇತ್ರೆ, ಚನ್ನವೀರ ಜಮಾದಾರ, ರಾಹನ್ ಚೌದರಿ, ಬಸವರಾಜ ಘಾಳೆ ಇತರರಿದ್ದರು.