oplus_2 
ಜಿಲ್ಲೆ

ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅವಶ್ಯಕ: ರಂಭಾಪುರಿಶ್ರೀ

ಮೈಸೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶ, ಮೌಲ್ಯ, ಅರಿವು ಆಚರಣೆ ಮುಖ್ಯ. ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀರಾಂಪುರದ ಶಿವಭವನದಲ್ಲಿ ಸೋಮವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಸುಖದ ಮೂಲ ಧರ್ಮದ ಆಚರಣೆಯಲ್ಲಿದೆ. ಅರಿತು ಆಚರಿಸಿ ಬಾಳುವುದೇ ನಿಜವಾದ ಧರ್ಮ ಎಂಬುದು ಅಶ್ವತವೃಕ್ಷ ಇದ್ದಂತೆ. ಆ ವೃಕ್ಷದ ನೆರಳಿನಲ್ಲಿ ಸಕಲ ಜೀವರಾಶಿಗಳು ಬಾಳಿ ಬದುಕಿಸುವ ಶಕ್ತಿ ಇದೆ ಎಂದರು.

ಶ್ರೀ ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಇಷ್ಟಲಿಂಗಾರ್ಚನೆಯಿಂದ ಸಂಕಷ್ಟಗಳು ದೂರವಾಗಿ ಇಷ್ಟಾರ್ಥ ಫಲಗಳು ಪ್ರಾಪ್ತವಾಗುತ್ತವೆ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಪುಣ್ಯ ಫಲ ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಸತ್ಯ ಧರ್ಮದ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಂಡಾಗ ಬದುಕು ಸಮೃದ್ಧಗೊಳ್ಳುತ್ತದೆ ಎಂದರು.

ಮೈಸೂರಿನಲ್ಲಿ ಇಷ್ಟಲಿಂಗ ಮಹಾಪೂಜೆ ಹಮ್ಮಿಕೊಂಡಿರುವುದು ಸಕಲ ಭಕ್ತರಿಗೆ ಹರುಷವನ್ನು ಉಂಟು ಮಾಡಿದೆ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳು ಆಯೋಜಿಸಿದರೆ ಯುವ ಜನಾಂಗಕ್ಕೆ ಅರಿವು ಉಂಟಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.

ಅರಮನೆ ಜಪದಕಟ್ಟಿ ಮಠದ ಶ್ರೀ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಸಾಗರ ನವಲಿ ಹಿರೇಮಠದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ವಿರೂಪಾಕ್ಷ, ಟಿ.ಟಿ.ಮಹೇಶ್, ಪ್ರಸನ್ನಕುಮಾರ್, ಆದಪ್ಪ ಶೆಟ್ಟರು, ಎನ್.ಜಿ.ಗಿರೀಶ, ವೀರೇಶ, ಖಂಡೇಶ್, ಅಶೋಕ ಹಾಗೂ ಕುಮಾರಸ್ವಾಮಿ ಇದ್ದರು.

ಹಲವಾರು ಗಣ್ಯರಿಗೆ ದಾನಿಗಳಿಗೆ ಶ್ರಿ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಧನಗೂರು ಬೃಹನ್ಮಠದ ಮುಮ್ಮಡಿ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು. ದಿನೇಶ್ ಶಾಸ್ತ್ರಿ ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಶಿವಭವನದಲ್ಲಿ ಶ್ರೀ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಭಕ್ತರಿಗೆ ಅನ್ನದಾಸೋಹ ಸೇವೆಯನ್ನು ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಕಲ್ಪಿಸಿತ್ತು.