ಕಲಬುರಗಿ: ಅಗ್ನಿ ಶಾಮಕ ದಳದಲ್ಲಿ ಅತ್ಯುತ್ತಮ ಸೇವೆ ಮತ್ತು ಕರ್ತವ್ಯ ನಿಷ್ಠೆಗಾಗಿ ಪ್ರತಿ ವರ್ಷ ನೀಡುವ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶಾಂತಪ್ಪ ಪಟ್ಟೇದ್ ಅವರಿಗೆ ನೀಡಿ ಗೌರವಿಸಲಾಗಿದೆ.
ಬಡ ರೈತ ಸಿದ್ರಾಮಪ್ಪ ಅವರ ಪುತ್ರ ಶಾಂತಪ್ಪ, ಬಡತನದ ಮಧ್ಯೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮಾಡಿದ್ದಾರೆ. ಕಾಲೇಜು ಮೆಟ್ಟಿಲು ಹತ್ತುತ್ತಿರುವಾಗಲೇ ಅಗ್ನಿ ಶಾಮಕ ಸೇವೆಗೆ ಭರ್ತಿಯಾಗಿದ್ದು, ಪ್ರಸ್ತುತ ೨೦೨೩-೨೪ನೇ ಸಾಲಿನ ಪದಕಕ್ಕೆ ಭಾಜನರಾಗಿದ್ದಾರೆ.
೨೦೧೮ರಲ್ಲಿ ಪ್ರಮುಖ ಅಗ್ನಿಶಾಮಕ(ಹೆಡ್)ರಾಗಿ ಬಡ್ತಿ ಹೊಂದಿದ್ದರು. ಅಗ್ನಿ ಕರೆ, ರಕ್ಷಣೆ ಕರೆಗಳಲ್ಲಿ ಹಲವು ಸಾರ್ವಜನಿಕ ಜೀವ ಮತ್ತು ಆಸ್ತಿ ರಕ್ಷಿಸುವಲ್ಲಿ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಅವಘಡಗಳು, ಅಗ್ನಿ ದುರಂತಗಳ ವೇಳೆ ಯಶಸ್ವಿಯಾಗಿ ಕೆಲಸ ಮಾಡಿದ್ದರು. ಕಾರ್ಯಶೈಲಿಗೆ ೨೦೨೨ರಲ್ಲಿ ಕೇಂದ್ರ ಸರ್ಕಾರದಿಂದ ಕಂಚಿನ ಪದಕ ದೊರಕಿತ್ತು. ಅಲ್ಲದೆ ವಿವಿಧ ಹಂತದ ಪ್ರಶಸ್ತಿ ಪಡೆದಿದ್ದಾರೆ. ೨೦೨೩-೨೪ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹುಡುಕಿ ಬಂದಿದೆ. ಕಲಬುರಗಿ ಅಗ್ನಿ ಶಾಮಕ ಠಾಣೆಯ ಎಲ್ಲ ಸಿಬ್ಬಂದಿ ಅಭಿನಂದಿಸಿದ್ದಾರೆ.