ಶಹಾಬಾದ್: ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರನಾಗಿದ್ದು, ಚಿತ್ರಗಳು ಇತಿಹಾಸವನ್ನು ನೆನಪಿಸುತ್ತವೆ ಎಂದು ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದ ನಿರ್ದೇಶಕ ವಾಸುದೇವ ಚವ್ಹಾಣ್ ಹೇಳಿದರು.
ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಂಕೂರಿನ ಯುವ ಚಿತ್ರಕಲಾವಿದ ಖಾಜಾ ಪಟೇಲ್ ಕಲ್ಲಬೇನೂರ ಅವರ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಾಯಾಚಿತ್ರಗಳು ಪ್ರತಿ ಕ್ಷೇತ್ರಕ್ಕೂ ಅವಶ್ಯವಾಗಿದೆ. ಒಂದು ಪೋಟೋ ಸಹಸ್ರಾರು ಅಕ್ಷರಗಳಿಗೆ ಸಮನಾಗಿದ್ದು, ಅನಕ್ಷರಸ್ಥರ ಅಜ್ಞಾನ ಹೊಡೆದೊಡಿಸುವ ಶಕ್ತಿ ಚಿತ್ರಕ್ಕಿದೆ ಎಂದರು.
ಉಪ ಪ್ರಾಚಾರ್ಯರಾದ ಸಿಸ್ಟರ್ ರಿಷಿಕ್ ರೋಸ್ ಮಾತನಾಡಿ, ಕಲಾವಿದರು ಆಸಕ್ತಿಯಿಂದ ಸೆರೆಹಿಡಿದ ಚಿತ್ರಗಳು ವಿಶಿಷ್ಟವಾಗಿರುತ್ತವೆ. ಚಿತ್ರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೌದ್ಧ ಮಹಾಸಭಾ ಅಧ್ಯಕ್ಷ ಸುರೇಶ ಮೆಂಗನ್ ಮಾತನಾಡಿದರು. ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅನುಪಮ ಅಧ್ಯಕ್ಷತೆ ವಹಿಸಿದ್ದರು. ಛಾಯಾಗ್ರಾಹಕರಾದ ಆನಂದ ಭಂಕೂರ, ಅರವಿಂದ ಚವ್ಹಾಣ್, ಪ್ರಮುಖರಾದ ಸುನೀಲ ಭಗತ, ಗೌಡಪ್ಪ ಗೌಡ ಇತರರಿದ್ದರು. ಭರತ ಧನ್ನಾ ನಿರೂಪಣೆ ಮಾಡಿದರು. ಖಾಜಾ ಪಟೇಲ್ ಪ್ರಾಸ್ತಾವಿಕ ಮಾತನಾಡಿದರು. ರವಿ ದಾಚಂಪಲ್ಲಿ ವಂದಿಸಿದರು.