ಮೈಸೂರು: ವಿದ್ಯಾರ್ಥಿಗಳು ಏಕಾಗ್ರತೆ ಬೆಳೆಸಿಕೊಂಡು, ಸಮಯ ಪರಿಪಾಲನೆಯೊಂದಿಗೆ ಶಿಸ್ತಿನಿಂದ ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ಶಿಕ್ಷಣ ತಜ್ಞ ಆರ್.ಎ.ಚೇತನ್‌ರಾಮ್ ಸಲಹೆ ನೀಡಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಇಲ್ಲವೇ ಇಲ್ಲ. ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಶಿಸ್ತಿಲ್ಲದ ಜೀವನ ವ್ಯರ್ಥ, ಏಕೆಂದರೆ ಅಧ್ಯಯನದಲ್ಲಿ ಶಿಸ್ತಿಲ್ಲದಿದ್ದರೆ ಓದು ಗೊಂದಲವಾಗುತ್ತದೆ. ಹಾಗೂ ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತಾಗುತ್ತದೆ ಎಂದರು.
ಶಿಕ್ಷಕರಾದವರಿಗೆ ಬೋಧನೆಯೊಂದೇ ಮುಖ್ಯವಲ್ಲ. ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಬೇಕು. ನಂತರ ಪಾಠ, ಪ್ರವಚನ ಮಾಡಿ ಜೀವನ ಮೌಲ್ಯಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವುದೇ ಅವರ ಜವಾಬ್ದಾರಿ ಆಗಿರುತ್ತದೆ. ಆದ್ದರಿಂದ ಗುರುಗಳು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಯತ್ತ ಗಮನಹರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್ ಮಾತನಾಡಿ, ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ಹಾಗೂ ಸಂಗೀತ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಯೋಗ, ಧ್ಯಾನದಲ್ಲಿ ಒಂದು ಗಂಟೆಯಾದರೂ ತೊಡಗಿಸಿಕೊಂಡರೆ ಓದಿನಲ್ಲಿಮನಸ್ಸು, ಏಕಾಗ್ರತೆ ಹಾಗೂ ನೆನಪಿನ ಶಕ್ತಿ ವೃದ್ಧಿಸುತ್ತದೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಶ್ರಮವೊಂದಿದ್ದರೆ ಯಶಸ್ಸು ತಾನಾಗಿಯೇ ಬರುತ್ತದೆ. ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ದೃಢ ಸಂಕಲ್ಪ ಹೊಂದಬೇಕು. ವಿದ್ಯಾರ್ಥಿಗಳು ಓದಿನ ಕಡೆ ಗಮನ ಇದ್ದರೆ ಗುರಿ ಮುಟ್ಟಬಹುದು ಎಂದು ತಿಳಿಸಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಜಿ.ವೆಂಕಟರಾಮ್, ಮನೋಜ್‌ಕುಮಾರ್, ಡಾ.ಡಿ.ಸಿ.ಉಮೇಶ್, ಡಾ.ಪೂಜಾ, ಎಂ.ಕೆ.ರಶ್ಮಿ ಇತರರು ಇದ್ದರು.