ಸರಗೂರು: ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಲವು ಸಲಹೆ ಮತ್ತು ಸೂಚನೆ ನೀಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಶವ ಸಾಗಿಸುವ ವಾಹನವನ್ನು ಖರೀದಿಸಬೇಕು. 12 ವಾರ್ಡ್‌ಗಳಲ್ಲೂ ಚರಂಡಿ ನೀರು ನೇರವಾಗಿ ಕಪಿಲ ನದಿ ಸೇರುತ್ತಿದೆ. ಅದನ್ನು ತಡೆಗಟ್ಟಲು ಕ್ರಮ ವಹಿಸಬೇಕು. 40 ಲಕ್ಷ ರೂ.ವೆಚ್ಚದಲ್ಲಿ ಸಂತೆಮಾಳದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ರೋಲಿಂಗ್ ಷೆಟರ್ ಹಾಕಿ ಬಾಡಿಗೆಗೆ ನೀಡಿದರೆ ಪಪಂಗೆ ಮತ್ತಷ್ಟು ಲಾಭ ಬರಲಿದ್ದು, ಇದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿದ್ದವರು ತಿಳಿಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಜಯ ಚಾಮರಾಜೇಂದ್ರ ಒಡೆಯರ್ ಕ್ರೀಡಾಂಗಣದ ಅಭಿವೃದ್ಧಿಗೆ ಪೂರಕ ಅನುದಾನ ಮೀಸಲಿಡಬೇಕು. ಇಲ್ಲವಾದಲ್ಲಿ ಕ್ರೀಡೆಗೆ ಹಿನ್ನಡೆಯಾಗಲಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ಹಾಕಬೇಕು ಎಂದರು.
ಪಪಂ ಮುಖ್ಯಾಧಿಕಾರಿ ವಸಂತಕುಮಾರಿ ಮಾತನಾಡಿದರು. ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ಎಸ್.ಎಲ್.ರಾಜಣ್ಣ, ಶ್ರೀನಿವಾಸ್, ಹೇಮಾವತಿ ರಮೇಶ್, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ,ನೂರಳಾ ಸ್ವಾಮಿ, ದಿವ್ಯಾ ನವೀನ್, ಚೆಲುವ ಕೃಷ್ಣ, ರಂಗಸ್ವಾಮಿ , ಶಿವಕುಮಾರ್, ಪ್ರಸಾದ್, ರಮೇಶ್, ವರ್ತಕರ ಸಂಘ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವೆಂಕಟೇಶ್, ಸವಿತಾ ಸಮಾಜ ಅಧ್ಯಕ್ಷ ಬಸವರಾಜು, ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೃಷ್ಣ, ಆಟೋ ಜೋಗಪ್ಪ, ಇದ್ದರು.