ಬೀದರ್: ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯೂನಿಟ್ (ಎಐಸಿಯು) ಮಾದರಿ ಅನುಸರಿಸಿ ಬೀದರ್ ತಾಲೂಕಿನ ಕನ್ನಡ ಹಾಗೂ ಉರ್ದು ಮಾಧ್ಯಮದ 25 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದನ್ವಯ ಶಾಹೀನ್ ಸಮೂಹ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಹಾಗೂ ಗಣಿತ ಬೋಧನೆಗೆ 25 ಶಿಕ್ಷಕರನ್ನು ಒದಗಿಸಲಿದೆ.
ಇತ್ತೀಚೆಗೆ ಜಿಲ್ಲಾಡಳಿತದೊಂದಿಗೆ ನಡೆದಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ 2023-24ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.40ಕ್ಕೂ ಕಡಿಮೆ ಬಂದಿದ್ದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ರಿಸಲ್ಟ್ ವೃದ್ಧಿಗೆ ಬೋಧನಾ ಸೇವೆ ಒದಗಿಸಲು ಶಾಹೀನ್ ಒಪ್ಪಿಕೊಂಡಿದ್ದು, ಶೀಘ್ರವೇ ಅರ್ಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತರು ಸಂಸ್ಥೆಗೆ ಅರ್ಜಿ ಸಲ್ಲಿಸಬಹುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಶಿಕ್ಷಕರಿಗೆ ಮಾಸಿಕ 15 ಸಾವಿರ ಗೌರವಧನ ಕೊಡಲಾಗುವುದು. 2024-25ರ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುವವರೆಗೆ ಶಾಲೆಗಳಿಗೆ ಶಿಕ್ಷಕರ ಸೇವೆ ಲಭಿಸಲಿದೆ. ಶಿಕ್ಷಕರು ಬೋಧನೆಗೆ ಶಾಹೀನ್ ಸಮೂಹದ ಶಾಲಾ-ಕಾಲೇಜುಗಳಲ್ಲಿನ ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯೂನಿಟ್ ಮಾದರಿ ಅನುಸರಿಸಿ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಹಾಗೂ ಗಣಿತ ವಿಷಯ ಸುಲಭವಾಗಿಸುವ ದಿಸೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.