ಜಿಲ್ಲೆ

ಶರಾವತಿ ಸಂತ್ರಸ್ತರು, ಅಡಕೆ ರೋಗಕ್ಕೆ ಪರಿಹಾರ; ಹಿಂದೆಯೂ ಸರ್ಕಾರ ಹಿತ ಕಾಯ್ದಿದೆ: ಸಿಎಂ ಬಸವರಾಜ ಬೊಮ್ಮಾಯಿ

ಶಿವಮೊಗ್ಗ: ಶರಾವತಿ ಸಂತ್ರಸ್ತರು ಹಾಗೂ ಅಡಕೆ ಬೆಳೆಗಾರರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಎಲೆಚುಕ್ಕೆ ರೋಗ ನಿರ್ವಹಣೆ ಹಾಗೂ ಶರಾವತಿ ಸಂತ್ರಸ್ತರ ದಶಕಗಳ ಹಿಂದಿನ ಸಮಸ್ಯೆಗೆ ನಿಶ್ಚಿತವಾಗಿಯೂ ಪರಿಹಾರ ಒದಗಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ತೀರ್ಥಹಳ್ಳಿಯಲ್ಲಿ ಭಾನುವಾರ 618 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಹಳದಿ ಎಲೆ ರೋಗ, ಬೆಲೆ ಅಸ್ಥಿರತೆ ಸಂದರ್ಭದಲ್ಲೂ ನಮ್ಮ ಸರ್ಕಾರ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಿದೆ. ಈಗಲೂ ನಾವು ಬೆಳೆಗಾರರೊಂದಿಗೆ ಇದ್ದೇವೆ ಎಂದರು.

ಶರಾವತಿ ಸಂತ್ರಸ್ತರು ಹಲವು ದಶಕಗಳಿಂದ ಅನಿಶ್ಚಿತತೆಯಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಅವಕಾಶವಿದ್ದ ಸಂದರ್ಭದಲ್ಲಿ ಸುಮ್ಮನಿದ್ದವರು ಈಗ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಶಾಸಕರ ಅವಧಿಯಲ್ಲಿ ನೂರಾರು ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಮಂಜೂರಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆ ಹಣ ಎಲ್ಲಿಗೆ ಹೋಯಿತು ಎಂದು ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಸರ್ಕಾರದಲ್ಲಿ ಕೇವಲ ಘೋಷಣೆ ಮಾಡುವುದಿಲ್ಲ. ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದ ಬಳಿಕವೇ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ರೋಗಕ್ಕೆ ಪಾದಯಾತ್ರೆ ಮದ್ದಲ್ಲ!: ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕಾಲ್ನಡಿಗೆ ಜಾಥಾ ಮದ್ದಲ್ಲ. ಒಂದು ವೇಳೆ ಪಾದಯಾತ್ರೆಯೇ ಔಷಧ ಎಂಬುವುದಾದರೆ ನಾವೂ ಪಾದಯಾತ್ರೆಗೆ ಸಿದ್ಧ ಎಂದು ಸಚಿವ ಆರಗ ಜ್ಞಾನೇಂದ್ರ ಪರೋಕ್ಷವಾಗಿ ರಾಜಕೀಯ ಎದುರಾಳಿಗಳ ಬಗ್ಗೆ ವ್ಯಂಗ್ಯವಾಡಿದರು. ಕೆಲವರು ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಹಾಗೂ ಚುನಾವಣೆಗಾಗಿನ ಹೋರಾಟ ಎಂದು ಕಿಡಿಕಾರಿದರು.

ಋಣ ತೀರಿಸುವ ಕೆಲಸ: ಕಳೆದ ಬಾರಿ ಕ್ಷೇತ್ರದ ಜನರು ನನ್ನನ್ನು ದಾಖಲೆಯ ಅಂತರದ ಮತಗಳಿಂದ ಗೆಲ್ಲಿಸಿದ್ದಾರೆ. ನಾಲ್ಕು ಬಾರಿ ಶಾಸಕನಾಗಿ ಈಗ ಗೃಹ ಸಚಿವನಾಗಿದ್ದು ನನ್ನ ಕ್ಷೇತ್ರದ ಜನರ ಪ್ರೀತಿಯಿಂದ. ಕ್ಷೇತ್ರದಲ್ಲಿ ಅಭಿವೃದ್ಧಿಯ ಕೊರತೆ ಕಾಣಿಸುತ್ತಿತ್ತು. ಅದನ್ನು ನೀಗಿಸುವ ಪ್ರಯತ್ನ ಇಂದು ಮಾಡಿದ್ದೇನೆ. ರಾಜಕೀಯ ಶಕ್ತಿ ನೀಡಿದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಬಾಳೆಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನನ್ನ ಕನಸಿನ ಕೂಸು. ಇಂದು ಎರಡನೇ ಹಂತದಲ್ಲಿ 25 ಕೊಠಡಿಗಳನ್ನು ಉದ್ಘಾಟನೆ ಮಾಡಲಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆಗೆ ನಮ್ಮ ಸರ್ಕಾರವೇ ಪರಿಹಾರ ನೀಡಲಿದೆ. ಅಡಕೆ ಬೆಳೆಗಾರರ ಹಿತ ಕಾಯಲು ಎಲ್ಲ ಶಾಸಕರನ್ನು ಒಗ್ಗೂಡಿಸಲು ಯಶಸ್ವಿಯಾಗಿದ್ದೇನೆ ಎಂದರು.

ಗೆಲುವಿನ ಅಂತರ 50 ಸಾವಿರ: ಮುಂದಿನ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ 40-50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಮುಂದಿನ ಬಾರಿ ಜ್ಞಾನೇಂದ್ರ ಅವರಿಗೆ ಟಿಕೆಟ್ ನಿಶ್ಚಿತ ಎಂಬ ಸುಳಿವು ನೀಡಿದರು. ನಾನು ಹಲವು ಬಾರಿ ತೀರ್ಥಹಳ್ಳಿಗೆ ಬಂದಿದ್ದೇನೆ. ಯಾವ ಸಮಾವೇಶದಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಸಮೂಹವನ್ನು ಕಂಡಿರಲಿಲ್ಲ. ನೀವೆಲ್ಲ ಮನಸ್ಸು ಮಾಡಿದರೆ ಜ್ಞಾನೇಂದ್ರ ಅವರನ್ನು ತಡೆಗಟ್ಟಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಇಲ್ಲಿಗೆ ಬಂದವರು ತಲಾ 10 ವೋಟು ಹಾಕಿಸಿದರೂ ಆರಗ ಗೆಲುವಿನ ಅಂತರ 50 ಸಾವಿರವಾಗುತ್ತದೆ ಎಂದರು.

ಅಭಿವೃದ್ಧಿಗೆ ಮನ್ನಣೆ: ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮದಲ್ಲಿರುವ ಜನಸ್ತೋಮವೇ ನಿದರ್ಶನ. ಗೃಹ ಸಚಿವರಾದರೂ ಆರಗ ಜ್ಞಾನೇಂದ್ರ ಕ್ಷೇತ್ರದ ಅಭಿವೃದ್ಧಿ ಮರೆತಿಲ್ಲ. ಇಂದು ನೂರಾರು ಕೋಟಿ ರೂ. ಮೊತ್ತದ ಕಾಮಗಾರಿ ಉದ್ಘಾಟನೆಯಾಗಿದೆ. ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವೇ ತಿಂಗಳಲ್ಲಿ ತೀರ್ಥಹಳ್ಳಿ ಚಿತ್ರಣವೇ ಬದಲಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆ, ಗ್ರಾಮೀಣ ಭಾಗದ ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಒದಗಿಸುವಲ್ಲಿ ನಮ್ಮ ಸರ್ಕಾರ ಹೆಚ್ಚು ಆಸಕ್ತಿ ತೋರಿದ ಪರಿಣಾಮ ಒಂದೂವರೆ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಿದ್ದೇವೆ. ಮುಂದಿನ ವರ್ಷ ಇನ್ನೂ 24 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು.

ಹರಿದುಬಂದ ಜನಸಾಗರ: ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೀರ್ಥಹಳ್ಳಿ ಕ್ಷೇತ್ರದ ವಿವಿಧ ಭಾಗಗಳಿಂದ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಜೂನಿಯರ್ ಕಾಲೇಜು ಮೈದಾನ ಜನರಿಂದ ಸಂಪೂರ್ಣ ಭರ್ತಿಯಾಗಿತ್ತು. ನಿಗದಿತ ಸಮಯಕ್ಕಿಂತ ಎರಡು ತಾಸು ತಡವಾಗಿ ಕಾರ್ಯಕ್ರಮ ಆರಂಭವಾದರೂ ಜನರು ಕಡೆಯವರೆಗೂ ಇದ್ದುದು ವಿಶೇಷವಾಗಿತ್ತು. ಪ್ರತಿ ಗ್ರಾಪಂ ವ್ಯಾಪ್ತಿಯಿಂದಲೂ ತೀರ್ಥಹಳ್ಳಿಗೆ ಬಸ್ ಸೌಲಭ್ಯ ಒದಗಿಸಲಾಗಿತ್ತು. ಕೆಲ ಸಮಯ ತೀರ್ಥಹಳ್ಳಿಯ ಕೆಲವು ಬೀದಿಗಳಲ್ಲಿ ಎಳ್ಳಮಾವಾಸ್ಯೆ ಜಾತ್ರೆ ವೇಳೆ ಕಂಡುಬರುವಷ್ಟು ಜನಸ್ತೋಮವಿತ್ತು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಬಿ.ಎ.ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಸ್ವಾಮಿರಾವ್, ಕಡಿದಾಳು ದಿವಾಕರ್, ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ ಇತರರಿದ್ದರು.