ವಿಜಯವಾಣಿ ಸುದ್ದಿಜಾಲ ಆನೇಕಲ್
ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿರುವ ಪಟ್ಟಣ ಶರನ್ನವರಾತ್ರಿಗೆ ಸಜ್ಜಾಗಿದೆ.
ಪಟ್ಟಣದ ತಿಲಕ್ ಸರ್ಕಲ್‌ನ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಶರನ್ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ವಿಜಯದಶಮಿಯ ಪ್ರಯುಕ್ತ ದೇವಿಗೆ ಒಂಭತ್ತು ದಿನಗಳೂ ಬಗೆಬಗೆಯ ಅಲಂಕಾರ ಮಾಡಲಾಗುತ್ತಿದೆ. ನೃತ್ಯ, ಸಂಗೀತ, ನಾದಸ್ವರ ಕಛೇರಿಯು ಶರನ್ನವರಾತ್ರಿ ವೈಭವವನ್ನು ಹೆಚ್ಚು ಮಾಡಿದೆ. ದಸರೆಯ ಪ್ರಯಕ್ತ ಪಟ್ಟಣದ ಪ್ರಮುಖ ಬೀದಿಗಳನ್ನು ದೀಪಲಾಂಕೃತಗೊಳಿಸಲಾಗಿದ್ದು ಪಟ್ಟಣವು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪ್ರಯಕ್ತ ದೇವಿಗೆ ಶೈಲಪುತ್ರಿ, ಮಹಾಗೌರಿ, ಚಂದ್ರಘಂಟಾ ಅಲಂಕಾರಗಳನ್ನು ಮಾಡಲಾಗಿದೆ. ಅ.12ರವರೆಗೂ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತಿದೆ. ದಸರಾ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ನಾದಸ್ವರ ಕಚೇರಿ ಮತ್ತು ಕ್ಲಾಸಿಕಲ್ ಮ್ಯೂಸಿಕ್ ಭರತನಾಟ್ಯ ನೃತ್ಯ ಜನರ ಕಣ್ಮನ ಸೆಳೆಯಿತು. ಎಸ್.ಮಂಜುನಾಥ್ ಮತ್ತು ಎಸ್.ಧನಂಜಯ್ ಅವರು ಆಕರ್ಷಕ ನಾದಸ್ವರ ಕಚೇರಿ ನಡೆಸಿಕೊಟ್ಟರು. ಭರತನಾಟ್ಯ ಕಲಾವಿದರು ಡೋಲು ಮತ್ತು ನಾದಸ್ವರಕ್ಕೆ ತಕ್ಕಂತೆ ಪ್ರದರ್ಶನ ನೀಡಿದ್ದು ಜನರ ಆಕರ್ಷಣೆಯಾಗಿತ್ತು. ಅ.12ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಉದ್ದನೆಯ ಸಾಲು : ಪಟ್ಟಣದ ತಿಲಕ್ ಸರ್ಕಲ್‌ನಲ್ಲಿ ಸಂಜೆಯಾಗುತ್ತಿದ್ದಂತೆ ಉದ್ದನೆಯ ಸರತಿ ಸಾಲು ಸಾಮಾನ್ಯವಾಗಿದೆ. ಸಂಜೆ 6ಗಂಟೆಯಿಂದಲೇ ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳಲು ದೇವಾಲಯದೆಡೆಗೆ ಜಮಾಯಿಸುತ್ತಿದ್ದಾರೆ. ಕಿ.ಮೀ.ಗಟ್ಟಲೆ ಉದ್ದನೆಯ ಸಾಲು ದೇವಿಯ ದರ್ಶನಕ್ಕೆ ಕಾಯುತ್ತಿರುತ್ತಾರೆ. ಅಲಂಕೃತ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಭಕ್ತರು 2ಗಂಟೆಗಳಿಗೂ ಹೆಚ್ಚು ಕಾಲ ಸರತಿಯಲ್ಲಿ ನಿಂತು ದರ್ಶನ ಮಾಡುತ್ತಿದ್ದಾರೆ. ಭಕ್ತರ ಸುಗಮ ದರ್ಶನಕ್ಕೆ ದೇವಾಲಯ ಸಮಿತಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನವರಾತ್ರಿಯ ಪ್ರಯುಕ್ತ ಭಕ್ತರು ಬೆಳಗಿನಿಂದಲೂ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.