ಕಮಲನಗರ: ಅನುಭವ ಮಂಟಪ ಶರಣ ಮತ್ತು ಶರಣೆಯರ ಅನುಭಾವದ ಸಂಗಮವಾಗಿದ್ದು, ವಚನ ಸಾಹಿತ್ಯದ ಸಾರ ವಿಶ್ವಕ್ಕೆ ಉಣ ಬಡಿಸಿದ ಶರಣರು ಮಹಾನ್ ಸಮಾಜ ಸುಧಾರಕರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಹೇಳಿದರು.
ತಾಲೂಕಿನ ಖೇಡ ಸಂಗಮ ಗ್ರಾಮದ ಹಿರೇಮಠ ಸಂಸ್ಥಾನ ವಿದ್ಯಾಪೀಠದ ನೀಲಾಂಬಿಕೆ ಆಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೪೫ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವದ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕಲ ಜೀವಾತ್ಮರಿಗೆ ಲೇಸನ್ನೆ ಕಂಡ ಶರಣರು ಸಂತೃಪ್ತ ಮತ್ತು ಕ್ರಾಂತಿಕಾರಿ ಸಮಾಜದ ಬದಲಾವಣೆಗೆ ಮುಂದಾದರು. ತಮ್ಮ ಅನುಭಾವದ ಸಾರವನ್ನು ಸರಳ ಭಾಷೆಯಲ್ಲಿ ಹಿಡಿದಿಟ್ಟು ಜನಸಾಮಾನ್ಯರಲ್ಲಿ ವೈಚಾರಿಕತೆ ಮತ್ತು ಹೃದಯ ವೈಶಾಲ್ಯತೆ ಮೂಡಿಸುವತ್ತ ಗಮನ ಹರಿಸಿದರು. ವಚನಗಳು ವೇದಿಕೆಗೆ ಸೀಮಿತಗೊಳ್ಳದೆ ಜನರ ಬದುಕಿನಲ್ಲಿ ಹೊಸತನ ತರುವ ಮತ್ತು ಅನುಭಾವಗಳ ಮಂಥನವಾಗಬೇಕು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ನೀಲಾಂಬಿಕೆ ಆಶ್ರಮದ ಡಾ.ಮಹಾದೇವಮ್ಮ ತಾಯಿ ಮಾತನಾಡಿ, ಆಸೆ ಮತ್ತು ಆಮಿಷಗಳನ್ನು ತೊರೆದು ಕಲ್ಯಾಣದೆಡೆಗೆ ಪಾದಯಾತ್ರೆ ಕೈಗೊಂಡು ವಚನ ಸಾಹಿತ್ಯದ ಝೆಂಕಾರ ಮೊಳಗಿಸಬೇಕು. ಬದುಕು ಶಾಶ್ವತವಲ್ಲ. ಆದರೆ ಬದುಕಿನ ಸರ್ವಸ್ವವನ್ನು ಶರಣರ ವಚನ ಸಾಹಿತ್ಯದ ಅಧ್ಯಯನಕ್ಕೆ ಮೀಸಲಿಡಬೇಕು ಎಂದರು.
ಓಂಪ್ರಕಾಶ ಬಿರಾದಾರ ಸಭೆ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂಜುಕುಮಾರ ಜುಮ್ಮಾ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವ ಸಮಿತಿ ತಾಲೂಕಾಧ್ಯಕ್ಷ ಧನರಾಜ ರಾಗಾ ಬಸವ ಪೂಜೆ ನೆರವೇರಿಸಿದರು.
ಶರಣೆಯರಾದ ನೀಲಾಂಬಿಕೆ ತಾಯಿ ಕಪಲಾಪುರ, ದೇವಮ್ಮ ತಾಯಿ ಡೋಣಗಾಪುರ, ಶರಣಾಂಬಿಕೆ ತಾಯಿ, ಗುರುದೇವಿ ತಾಯಿ, ದಾನಮ್ಮ ತಾಯಿ, ಶ್ರೀಕಾಂತ ಬಿರಾದಾರ, ಜಗನ್ನಾಥ ಜೀರಗೆ, ರಮೇಶ ಬಿರಾದಾರ, ನೀಲಕಂಠ ಬಿರಾದಾರ, ವರ್ಷಾ ಬಿರಾದಾರ ಇತರರಿದ್ದರು.
ಶಾಲಾ ಮಕ್ಕಳಿಂದ ವಚನ ನೃತ್ಯ ನಡೆಯಿತು. ಶಿಕ್ಷಕಿ ರೇಷ್ಮಾ ಹೊಳಸಂಬ್ರೆ ಸ್ವಾಗತಿಸಿದರು. ಮುಖ್ಯಗುರು ಸಂಜೀವಕುಮಾರ ಮೆಂಗಾ ನಿರೂಪಣೆ ಮಾಡಿದರು.