ಚಡಚಣ: ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶರಣ ಕಲ್ಲಯ್ಯನವರ ಸಮಾಧಿ ಹಾಗೂ ಸ್ಮಾರಕವನ್ನು ನೆಲಸಮ ಮಾಡಲು ಮುಂದಾಗಿರುವ ದೇವಸ್ಥಾನ ಕಮೀಟಿಯ ನಿರ್ಣಯ ಖಂಡಿಸಿ ಕರವೇ ವಲಯಾಧ್ಯಕ್ಷ ಸೋಮಶೇಖರ ಕಂಬಾರ ನೇತೃತ್ವದಲ್ಲಿ ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕರವೇ ಮುಖಂಡರಾದ ಸೋಮಶೇಖರ ಕಂಬಾರ, ಮಹಾದೇವ ಬನಸೋಡೆ ಮಾತನಾಡಿ, ಪ್ರತಿವರ್ಷ ಜಾತ್ರೆಯಂದು ದೇವರ ನುಡಿ ಹೇಳುತ್ತಿದ್ದ ರಾಚಯ್ಯ ಡೋಣಜಮಠ, ಈರಯ್ಯ ಡೋಣಜಮಠ ಹಾಗೂ ಶರಣು ಸಾವಳಗಿ ಅವರ ಸಮಾಧಿ ಸ್ಮಾರಕಗಳು ದೇವಸ್ಥಾನದ ಆವರಣದಲ್ಲಿ ಅನೇಕ ವರ್ಷಗಳಿಂದ ಇವೆ. ಆದರೆ, ಕೆಲ ವರ್ಷಗಳ ಹಿಂದೆ ದೇವಸ್ಥಾನದ ಸಮಿತಿಯವರು ಏಕಾಏಕಿ ಈ ಮೂರು ಸಮಾಧಿಗಳನ್ನು ನೆಲಸಮ ಮಾಡಿದ್ದಾರೆ ಎಂದು ದೂರಿದರು.
18-19ನೇ ಶತಮಾನದಲ್ಲಿ ಬಾಳಿ ಬದುಕಿದ ಶರಣ ಕಲ್ಲಯ್ಯನವರ ಸಮಾಧಿ ಸ್ಮಾರಕವನ್ನು ಸಮಿತಿಯವರು ಕಾನೂನು ಬಾಹಿರವಾಗಿ ನೆಲಸಮ ಮಾಡಲು ಹೊರಟಿದ್ದಾರೆ. ಇದು ಭಕ್ತ ವೃಂದದಲ್ಲಿ ಆತಂಕವನ್ನುಂಟು ಮಾಡಿದೆ. ಜಿಲ್ಲಾಡಳಿತ ಕೂಡಲೇ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಮದೇವ ಕಂಬಾರ, ಶರಣಪ್ಪ ಆಲಕುಂಟೆ, ಸುರೇಶ ಕಂಬಾರ, ಶಿವಾನಂದ ವಾಲಿ, ಕಲ್ಮೇಶ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.