ಜಿಲ್ಲೆ

ಶರಣರ ಸಂಘಟನೆ ವೇದಿಕೆಯಿಂದ ನಿರುದ್ಯೋಗಿಗಳಿಗೆ ಉದ್ಯೋಗ

ಮದ್ದೂರು: ನಗರದ ಅಂಬೇಡ್ಕರ್ ಭವನದಲ್ಲಿ ಶರಣರ ಸಂಘಟನೆ ವೇದಿಕೆ ಮದ್ದೂರು ಘಟಕ ಹಾಗೂ ಮಂಡ್ಯ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇತ್ತೀಚೆಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ನಗರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಹಲವಾರು ಮಂದಿ ವಿದ್ಯಾಭ್ಯಾಸ ಪಡೆದಿದ್ದರೂ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿ ಬದುಕುತ್ತಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡಲು ಶರಣರ ಸಂಘಟನೆ ವೇದಿಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಗಳು ತಲೆದೋರಿದೆ. ಇದನ್ನು ನಿವಾರಿಸಲು ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಮುಂದಾದರೆ ನಿರುದ್ಯೋಗಿಗಳ ಬಾಳು ಬೆಳಕಾಗುತ್ತದೆ ಎಂದರು.

ಶರಣರ ಸಂಘಟನೆ ವೇದಿಕೆಯ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ಸಂಘಟನೆ ವೇದಿಕೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ನಮ್ಮ ಸಂಘಟನೆಯಲ್ಲಿ ಯಾವುದೇ ಜಾತಿ, ಪಕ್ಷಭೇದವಿಲ್ಲದೆ ಸಮಾಜಮುಖಿ ಕೆಲಸದಲ್ಲಿ ನಮ್ಮ ವೇದಿಕೆ ಪದಾಧಿಕಾರಿಗಳು ತೊಡಗಿದ್ದಾರೆ. ಮುಂದಿನ ದಿನಗಳಲ್ಲೂ ನಮ್ಮ ವೇದಿಕೆ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಶರಣರ ಸಂಘಟನೆ ವೇದಿಕೆಯ ತಾಲೂಕು ಅಧ್ಯಕ್ಷ ಶಿವಪುರ ಗಂಗಾಧರ್ ಮಾತನಾಡಿ, ಉದ್ಯೋಗ ಮೇಳವನ್ನು ಯಶಸ್ಸಿಗೊಳಿಸಲು ಸಹಕಾರ ನೀಡಿದ ಮಂಡ್ಯ ಉದ್ಯೋಗ ವಿನಿಮಯ ಕಚೇರಿ ಹಾಗೂ ತಾಲೂಕಿನ ಎಲ್ಲ ಕಾಲೇಜಿನ ಪ್ರಾಧ್ಯಾಪಕರಿಗೆ ಹಾಗೂ ತಾಲೂಕಿನ ಎಲ್ಲ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ 486 ನಿರುದ್ಯೋಗಿಗಳು ಭಾಗವಹಿಸಿದ್ದು ಅದರಲ್ಲಿ 29 ಮಂದಿಗೆ ಕಾಯಂ ಉದ್ಯೋಗವಕಾಶ ಸಿಕ್ಕಿದ್ದು, 43 ಮಂದಿಗೆ ತರಬೇತಿ ಉದ್ಯೋಗಕ್ಕೆ ಆಯ್ಕೆಗೊಳಿಸಲಾಗಿದ್ದು, 54 ಮಂದಿಗೆ ವಿವಿಧ ಕಂಪನಿಗಳಲ್ಲಿ ಅವಕಾಶ ಸಿಕ್ಕಿದ್ದು, ಇನ್ನುಳಿದವರಿಗೆ ಉದ್ಯೋಗವನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದರು.

ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಶರಣ ಸಂಘಟನೆಯ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಬಬ್ರುವಾಹನ, ಮದ್ದೂರು ನಗರಧ್ಯಕ್ಷ ಪರಮೇಶ್, ಮಹಿಳಾ ನಗರ ಅಧ್ಯಕ್ಷೆ ರಶ್ಮಿ, ತಾಲೂಕು ಉಪಾಧ್ಯಕ್ಷ ಭೀಮನಕೆರೆ ಬಸವರಾಜು, ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ತಾಲೂಕು ಸಂಚಾಲಕ ಗಿರೀಶ್, ಯುವ ಘಟಕದ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿಗಳಾದ ಶಿವಕುಮಾರ್, ಹುಲಿಕೆರೆ ನಾಗೇಶ್, ಹೋಬಳಿ ಅಧ್ಯಕ್ಷರಾದ ಕಲ್ಲೇಶ್, ಕೆಂಪರಾಜು, ಮಳವಳ್ಳಿ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ ಮುಖಂಡರಾದ ಹುಲಿಕೆರೆ ನಟರಾಜು, ನೈದಿಲೆ ಚಂದ್ರು, ಕದಲೂರು ರವಿ, ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.