ರಾಯಚೂರಿನಲ್ಲಿ ಬಸವಕೇಂದ್ರ ಮತ್ತು ಅಕ್ಕನ ಬಳಗದಿಂದ ಶ್ರಾವಣಮಾಸದ ನಿಮಿತ್ತ ಶನಿವಾರ ಸಂಜೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಪದಾಕಾರಿಗಳಾದ ಜೆ.ಬಸವರಾಜ, ಚನ್ನಬಸವಣ್ನ ಮಹಾಜನಶೆಟ್ಟಿ, ಅಕ್ಕನ ಬಳಗದ ಲಲಿತಾ ಬಸನಗೌಡ, ಅನ್ನಪೂರ್ಣಮ್ಮ ಮೇಟಿ ಇದ್ದರು. 
ಜಿಲ್ಲೆ

ಶರಣರ ವೈಚಾರಿಕ ಚಿಂತನೆಗಳು ಸರ್ವಕಾಲಿಕ ಸತ್ಯ

ರಾಯಚೂರು: ಶರಣರ ವೈಚಾರಿಕ, ಪ್ರಗತಿಪರ ಚಿಂತನೆಗಳು ಸರ್ವಕಾಲಿಕ ಸತ್ಯವಾಗಿದ್ದು, ನಮ್ಮನ್ನು ನಾವು ಅರಿತು ನಿರ್ಭಯವಾಗಿ ಬದುಕುವುದನ್ನು ಶರಣರು ತಮ್ಮ ವಚನಗಳು ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ನಿವೃತ್ತ ಉಪನ್ಯಾಸಕಿ ಜಯಶ್ರೀ ಮಹಾಜನಶೆಟ್ಟಿ ಹೇಳಿದರು.
ಸ್ಥಳೀಯ ಡ್ಯಾಡಿ ಕಾಲನಿಯ ಚನ್ನಬಸವರ ಮನೆಯಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದಿಂದ ಶನಿವಾರ ಸಂಜೆ ಆಯೋಜಿಸಿದ್ದ ಶ್ರಾವಣಮಾಸದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದಿನ ಜಿಡ್ಡು ಕಟ್ಟಿದ ಸಮಾಜದಲ್ಲಿನ ಕಂದಾಚಾರ, ವೌಢ್ಯಾಚಾರಗಳು ಸಾಮಾನ್ಯ ಜನರ ಶೋಷಣೆಗೆ ಕಾರಣವಾಗಿದ್ದವು. ಅವುಗಳ ವಿರುದ್ಧ ಶರಣರು ಹೋರಾಡಿದರು ಎಂದರು.
ದೇವರು ಮತ್ತು ಧರ್ಮದ ಸ್ಪಷ್ಟನೆ ಕಲ್ಪನೆ ಎಲ್ಲಿಯವರೆಗೂ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಭಯದ ವಾತಾವರಣದಲ್ಲಿ ಬದುಕಬೇಕಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ವೈಚಾರಿಕ ಮಾರ್ಗದಲ್ಲಿ ನಾವು ನಡೆದು ಬದುಕನ್ನು ವಿಕಾಸಗೊಳಿಸಿಕೊಳ್ಳಬೇಕು ಎಂದು ಜಯಶ್ರೀ ಮಹಾಜನಶೆಟ್ಟಿ ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ಶರಣರ ಚಿಂತನೆಗಳು ಮನೆ ಮನಗಳಿಗೆ ಮುಟ್ಟುವಂತಾಗಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶರಣರ ವಚನಗಳನ್ನು ಪಠಣ ಮಾಡುವುದನ್ನು ಕಲಿಸಬೇಕು ಎಂದು ತಿಳಿಸಿದರು.