ಜಿಲ್ಲೆ

ಶರಣರ ವಿಚಾರ ಇಂದಿಗೂ ಪ್ರಸ್ತುತ

ಮಾಂಜರಿ: ಹನ್ನೆರಡನೆಯ ಶತಮಾನದ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಸಮಾಜ ದಾರಿತಪ್ಪುತ್ತಿರುವ ಸಮಯದಲ್ಲಿ ಶರಣರ ವಿಚಾರಗಳನ್ನು ಅವಲೋಕಿಸುವುದು ಸಮಂಜಸವೆನಿಸಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು, ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಡಾ. ಚನ್ನಸಿದ್ದರಾಮಯ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶುಕ್ರವಾರ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ನಡೆಯಲಿರುವ ಶರಣರ ಚರಿತ್ರಾಮೃತ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ವಚನ ಎಲ್ಲ ಕಾಲಕ್ಕೂ ಜೀವಂತ ಮೌಲ್ಯ ಪ್ರತಿಪಾದಿಸುತ್ತದೆ. ಇಂದಿನ ಒತ್ತಡದ ಬದುಕಿಗೆ ಅವರ ವಿಚಾರಗಳು ದಿವ್ಯ ಔಷಧಗಳಾಗಿವೆ. ಯುವಜನಾಂಗ ದಾರಿತಪ್ಪುತ್ತಿದೆ. ಯೌವನಾವಸ್ಥೆಯಲ್ಲಿ ವ್ಯಸನಗಳಿಗೆ ಈಡಾಗುತ್ತಿದ್ದಾರೆ. ಯುವಜನಾಂಗ ಕೈತಪ್ಪಿದರೆ ಸಮಾಜ ಹಾಗೂ ಧರ್ಮ ಉಳಿಸುವುದು ದುರ್ಲಬ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಸಮಾಜವನ್ನು ಶುದ್ಧೀಕರಿಸುವ ಸಂಜೀವಿನಿ ಶರಣರ ಮಾತುಗಳಲ್ಲಿ ಅಡಗಿದೆ. ವಚನ ಸಂಹಿತೆ ಬದುಕಿನ ಆದರ್ಶ ಜೀವನಕ್ಕೆ ಸೋಪಾನವಾಗಿದೆ. ವಚನಗಳನ್ನು ಅರಿತು ನಡೆದರೆ ಜೀವನ ಪಾವನವಾಗುತ್ತದೆ ಎಂದರು ಹೇಳಿದರು.

ಪ್ರವಚನಕಾರ ಬಸವರಾಜ ಶರಣರು ಮಾತನಾಡಿ, ಸಿದ್ಧಾಂತಕ್ಕೆ ಒತ್ತು ನೀಡಿದ್ದ ಶರಣರು ಕಾಯಕ ಸಂಸತಿ ಎತ್ತಿಹಿಡಿದರು. ಶರಣರು ಆತ್ಮನಿವೇದನೆಗೆ ಕರೆ ನೀಡಿದವರು. ಲಿಂಗಾಂಗ ಸಾಮರಸ್ಯದ ಮೂಲಕ ಜೀವನ ದರ್ಶನ ಮಾಡಿಕೊಟ್ಟರು. ಈಗ ಶ್ರಾವಣ ಮಾಸ ಪ್ರಾರಂಭವಾಗಿದ್ದು, ಲಿಂಗಪೂಜೆ ಮಾಡಿ, ಮಾಸಾನು ಪರ್ಯಂತ ಶರಣ ಸತ್ಸಂಗವನ್ನು ಆಲಿಸಿ ಜೀವನ ರೂಪಿಸಿಕೊಳ್ಳಿ ಎಂದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಕುಮಾರ ಕೋರೆ, ಬಸವರಾಜ ಕೋರೆ, ಅಣ್ಣಾಸಾಹೇಬ ಜಕಾತಿ, ಪಿಂಟು ಹಿರೇಕುರುಬರ, ತಮ್ಮನಿ ಗುಂಡುಕಲೆ, ಎಂ.ಎನ್​. ಮುಜುಕರ, ಸಂಜಯ ಚೌಧರಿ, ಯುವರಾಜ ಪಾಟೀಲ, ಮಹಾವೀರ ಕಾತ್ರಾಳೆ, ತುಕಾರಾಮ ಪಾಟೀಲ, ಬಾಳಪ್ಪ ಉಮರಾಣಿ, ಸುರೇಶ ಪಾಟೀಲ, ಶೋಭಾ ಜಕಾತಿ, ಅಜಿತ ಉಮರಾನೆ ಇದ್ದರು.