ಲಕ್ಷ್ಮೇಶ್ವರ: ಮಡಿವಾಳ ಮಾಚಿದೇವ ಶರಣರು ಸಮಾಜದಲ್ಲಿನ ಅಜ್ಞಾನ, ಅಂಧಕಾರ, ಮೇಲು-ಕೀಳು ಹೋಗಲಾಡಿಸಿ ಸತ್ಯ ಮತ್ತು ಕಾಯಕ ನಿಷ್ಠೆ, ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಶ್ರಮಿಸಿದ್ದರು ಎಂದು ಉಪ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಶರಣರು, ಸಂತರು, ದಾಸವರೇಣ್ಯರು ದೇವಮಾನವರಾಗಿ ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಅವರ ವಿಚಾರ, ತತ್ವಾದರ್ಶಗಳು, ತೋರಿದ ಮಾನವೀಯತೆಯ ಮಾರ್ಗ ಸರ್ವಕಾಲಕ್ಕೂ ಆಧರಣೀಯ. ಅನುಭವಕ್ಕಿಂತ ಅಮೃತವಿಲ್ಲ ಎಂಬಂತೆ ಶರಣರ ಅನುಭವಾಮೃತದ ನುಡಿಗಳು ಸೂರ್ಯಚಂದ್ರರಷ್ಟೇ ಸತ್ಯವಾಗಿದ್ದು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಸಾಗಬೇಕು’ ಎಂದರು.
ಮಡಿವಾಳ ಸಮಾಜದ ಮುಖಂಡರಾದ ಐ.ಎಸ್. ಮಡಿವಾಳರ ಮತ್ತು ನಿಂಬಣ್ಣ ಮಡಿವಾಳರ ಮಾತನಾಡಿ, ಮಡಿವಾಳ ಸಮಾಜದವರು ಎಲ್ಲ ರಂಗದಲ್ಲೂ ತೀರಾ ಹಿಂದುಳಿದಿದ್ದು ಸಮಾಜದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಪ್ರಯತ್ನಿಸಬೇಕು ಎಂದರು.
ಶಾಂತಪ್ಪ ಮಡಿವಾಳರ, ರುದ್ರಪ್ಪ ಮಡಿವಾಳರ, ಬಸವರಾಜ ಮಡಿವಾಳರ, ಯಲ್ಲಪ್ಪ ಮಡಿವಾಳರ, ಶ್ರೀಕಾಂತ ಮಡಿವಾಳರ, ಮಡಿವಾಳಪ್ಪ ಮಡಿವಾಳರ, ರಾಚಪ್ಪ ಮಡಿವಾಳರ, ಸೋಮು ಮಡಿವಾಳರ ಇತರರಿದ್ದರು.