ಬಸವಕಲ್ಯಾಣ: ವಚನ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ನೀಡಿ ಹಾಗೂ ಕಾಯಕಕ್ಕೆ ಆದ್ಯತೆ ನೀಡಿದ ಶರಣರ ಕಾಯಕ ಭೂಮಿ ಕಲ್ಯಾಣ ವಿಶ್ವಕ್ಕೆ ಶ್ರೇಷ್ಠವಾಗಿದೆ. ಈ ಪವಿತ್ರ ನೆಲದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸನ್ಮಾನಿಸುತ್ತಿರುವುದು ಖುಷಿ ತಂದಿದೆ ಎಂದು ನಾಡೋಜ ಡಾ.ಗೊ.ರು ಚನ್ನಬಸಪ್ಪ ಸಂತಸಪಟ್ಟರು.
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ಶನಿವಾರ ಸಂಜೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಸವಕಲ್ಯಾಣದಲ್ಲಿ ಹಿಂದೆ ಪೂಜ್ಯ ಲಿಂ.ಡಾ.ಚೆನ್ನಬಸವ ಪಟ್ಟದ್ದೇವರು ಅನುಭವ ಮಂಟಪ ನಿರ್ಮಿಸುವ ಮೂಲಕ ಬಸವ ತತ್ವದ ಪ್ರಜ್ಞೆ ಜಾಗೃತಗೊಳಿಸಿದರು. ಈಗ ಅನುಭವ ಮಂಟಪದ ಅಧ್ಯಕ್ಷರಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನಾಡಿನಾದ್ಯಂತ ಬಸವ ತತ್ವ ಪ್ರಚಾರ-ಪ್ರಸಾರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶರಣ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯವನ್ನು ಬೆಳಗಿಸಿದ ಕೀರ್ತಿ ನಾಡಿನ ಹಿರಿಯ ಸಾಹಿತಿಗಳಾದ ಡಾ.ಗೊ.ರು.ಚ ಅವರಿಗೆ ಸಲ್ಲುತ್ತದೆ. ಅವರಿಗೆ ದೊರೆತ ೧೧ ಲಕ್ಷ ರೂ ಪ್ರಶಸ್ತಿಯ ಹಣವನ್ನು ಶರಣ ಸಾಹಿತ್ಯ ಪರಿಷತ್ತಿಗೆ ನೀಡಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಸಹ ಅವರು ಬದುಕು ಸರಳವಾಗಿ ಸಾಗಿಸುತ್ತಿರುವದು ಆನಂದ, ಅನುಕರಣೀಯವಾಗಿದೆ ಎಂದು ಬಣ್ಣಿಸಿದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗೊ.ರು.ಚ ಅವರು ಶಿಸ್ತಿನ ಸಿಪಾಯಿ. ಅವರಲ್ಲಿಯ ಬದ್ದತೆ ನಮಗೆಲ್ಲ ಆದರ್ಶ. ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಂತರ ಕಲ್ಯಾಣಕ್ಕೆ ಬಂದಿರುವುದು ನಮಗೆ ಹಬ್ಬದಲ್ಲಿ ಆಗುವ ಸಂಭ್ರಮದಂತೆ ಭಾಸವಾಗುತ್ತಿದೆ. ಅವರು ಶತಾಯುಷಿಗಳಾಗಿ ಮತ್ತೆ-ಮತ್ತೆ ಶರಣರ ಕಾಯಕ ಭೂಮಿಗೆ ಆಗಮಿಸುತ್ತಿಲಿರಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ರಮಣಶ್ರೀ ಪ್ರಶಸ್ತಿ ಪುರಸ್ಕೃತ ವೀರಣ್ಣ ರಾಜೂರ ಮಾತನಾಡಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಜಯಶ್ರೀ ದಂಡೆ, ಡಾ.ಅಮರನಾಥ ಸೋಲಪುರೆ, ಡಾ.ಜೆ.ಎಸ್.ಪಾಟೀಲ್, ಡಾ.ಕಾಶಿನಾಥ ಅಂಬಲಗೆ, ಯೋಗೇಶ ಮಾಸ್ತರ್, ಬಿಕೆಡಿಬಿ ಆಯುಕ್ತ ಜಗನ್ನಾಥ ರೆಡ್ಡಿ, ಚಂದ್ರಕಾಂತ ತಳವಾಡೆ, ಚಂದ್ರಕಾಂತ ರೆಡ್ಡಿ ಇತರರಿದ್ದರು. ಶ್ರೀ ಗುರುಬಸವ ಪಟ್ಟದ್ದೇವರು ಸ್ವಾಗತಿಸಿದರು. ರಾಜು ಜುಬರೆ ನಿರೂಪಣೆ ಮಾಡಿದರು.