ಬಸವಕಲ್ಯಾಣ: ಶರಣರ ಪರುಷಪಾದದಿಂದ ಕಲ್ಯಾಣ ನೆಲ ಪಾವನಗೊಂಡಿದೆ ಎಂದು ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಭಾನುವಾರ ನಡೆದ ಶರಣೆ ದಾನಮ್ಮ ದೇವಿ ಉತ್ಸವದ ಸಮಾರೋಪ, ಗುರುವಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸಮುಷ್ಟಿ ಪ್ರಜ್ಞೆಯೊಂದಿಗೆ ಆದರ್ಶ ಜೀವನ ನಡೆಸಿದ ಶರಣರು ವೈಯುಕ್ತಿಕ ಜೀವನದಲ್ಲೂ ಆತ್ಮೋದ್ಧಾರಕ್ಕಾಗಿ ಗವಿಗಳಲ್ಲಿ ಲಿಂಗಾಂಗಯೋಗ ಮಾಡಲು ಕಲ್ಯಾಣದ ಸುತ್ತಮುತ್ತ ಪ್ರದೇಶದಲ್ಲಿ ವಾಸ ಮಾಡಿದ್ದರು. ಅಂಥವರ ಸಾಲಿನಲ್ಲಿ ಶರಣೆ ದಾನಮ್ಮನವರು ಒಬ್ಬರಾಗಿದ್ದಾರೆ. ಭಾರತದಾದ್ಯಂತ ಬಸವ ತತ್ವವನ್ನು ಪ್ರಚಾರ ಮಾಡಿದ ಅವರು ನಮಗೆಲ್ಲ ಪ್ರೇರೆಣೆಯಾಗಿದ್ದಾಳೆ ಎಂದರು.
ಶ್ರೀ ಬಸವಪ್ರಭು ಸ್ವಾಮೀಜಿ ಬಹುಮುಖ ಪ್ರತಿಭೆಯುಳ್ಳವರಾಗಿದ್ದು, ಅವರ ಸಂಶೋಧನೆ ಮಾಡಿ ಅಜ್ಞಾತವಾಗಿದ್ದ ದಾನಮ್ಮನ ಗವಿಯನ್ನು ಪತ್ತೆ ಹಚ್ಚಿದ್ದಾರೆ. ಕಲ್ಯಾಣ ಮಹಾಮನೆ ಕಟ್ಟಿ ಪ್ರತಿವರ್ಷ ಶರಣೆ ದಾನಮ್ಮನ ಉತ್ಸವ ಹಮ್ಮಿಕೊಂಡು ತನ್ಮೂಲಕ ಬಸವತತ್ವ ಪ್ರಸಾರ, ಪ್ರಚಾರ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವ ಜತೆಗೆ ಶರಣೆ ದಾನಮ್ಮನ ಗವಿ ಅಭಿವೃದ್ಧಿಗೆ ಸರ್ಕಾರಕ್ಕೂ ಪತ್ರ ಬರೆಯುವುದಾಗಿ ತಿಳಿಸಿದರು.
ನೇತೃತ್ವ ವಹಿಸಿದ್ದ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾನಮ್ಮ ಉತ್ಸವವು ಕೇವಲ ಉತ್ಸವವಲ್ಲ. ಇಲ್ಲಿ ಶರಣರ ಸಮಾಗಮವಾಗಿ ಶರಣ ಜ್ಞಾನ ಚಿಂತನ-ಮಂಥನ ಮಾಡಿ, ನಿಜ ಜೀವನದಲ್ಲಿ ಬಸವತತ್ವದ ಆಚರಣೆಯನ್ನು ಕಲಿಸಿ ಕೊಡುವ ಬದುಕಿನ ಉತ್ಸವವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ನಿಜಲಿಂಗ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಡಾ.ಗವಿಸಿದ್ದಪ್ಪ ಪಾಟೀಲ, ಬಲಭೀಮ ಪಾಟೀಲ, ಧರ್ಮಣ್ಣ ಪೂಜಾರಿ, ಸದಾನಂದ ಜಯಪ್ರಕಾಶ, ರಾಮ ಮಜಿಗೆ, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ಧಣ್ಣ, ಸುಮಿತ್ರಾ ದಾವಣಗಾವೆ, ವಿಜಯಕುಮಾರ ಚಿಂಚೋಳಿ ಇತರರಿದ್ದರು.
ಕಲ್ಯಾಣ ಮಹಾಮನೆಯಿಂದ ಕೊಡಮಾಡುವ ಕಲ್ಯಾಣ ರತ್ನ ಪ್ರಶಸ್ತಿಯನ್ನು ಸಾಹಿತಿ, ಚಿಂತಕಿ ಡಾ. ಜಯದೇವಿ ಗಾಯಕವಾಡ ಅವರಿಗೆ ಪ್ರಧಾನ ಮಾಡಿ ಗೌರವಿಸಲಾಯಿತು. ದಾನಮ್ಮ ದೇವಿ ಜ್ಯೋತಿ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದ ಶ್ರೀ ಬಸವಪ್ರಭು ಸ್ವಾಮೀಜಿ ಅವರನ್ನು ಪೂಜ್ಯರ ಸಾನ್ನಿಧ್ಯದಲ್ಲಿ ಬಸವ ಭಕ್ತರು ಸತ್ಕರಿಸಿ ಗುರುವಂದನೆ ಸಲ್ಲಿಸಿದರು.
ಪೂಜ್ಯ ಮಾತೆ ಮಹಾದೇವಿ ಅವರು ಬಸವತತ್ವವನ್ನು ಕಟ್ಟಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಮಾತಾಜಿ ಅವರ ಪರಮ ಶಿಷ್ಯರಾದ ಪೂಜ್ಯ ಬಸವಪ್ರಭು ಸ್ವಾಮೀಜಿ ಅವರಲ್ಲಿ ಬಸವತತ್ವದ ಗಟ್ಟಿತನ ಹಾಗೂ ಸಮಾಜದ ಕಳಕಳಿ ಇದೆ, ಈ ದಾನಮ್ಮ ಉತ್ಸವದ ಮೂಲಕ ದಾನಮ್ಮ ಒಬ್ಬ ಶ್ರೇಷ್ಠ ಶರಣೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
| ಶ್ರೀ ಡಾ. ಶಿವಾನಂದ ಮಹಾಸ್ವಾಮೀಜಿ ಹುಲಸೂರು