ಜಿಲ್ಲೆ

ಶರಣರ ನುಡಿ ಆಲಿಕೆ ಶ್ರಾವಣ ಮಾಸದ ವಿಶೇಷ

ಕಲಬುರಗಿ: ಶ್ರಾವಣ ಎಂದರೆ ಶ್ರವಣ ಮಾಡುವುದು ಎಂದರ್ಥ. ಶ್ರಾವಣ ಮಾಸದಲ್ಲಿ ಬಹುತೇಕ ಮಠಗಳಲ್ಲಿ ಪುರಾಣ, ಪ್ರವಚನ ಹಚ್ಚುವ ಮೂಲಕ ಜನತೆಗೆ ಬಸವಾದಿ ಶಿವಶರಣರ ಒಂದಿಷ್ಟು ಮಾತುಗಳನ್ನು ಕೇಳಿಸುತ್ತಾ ಬರಲಾಗುತ್ತಿದೆ. ಶರಣರ ನುಡಿಗಳನ್ನು ಕೇಳುವುದು ಶ್ರಾವಣ ಮಾಸದ ವಿಶೇಷ ಎಂದು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಸಾಯಿ ಮಮದಾಪುರ ಹೇಳಿದರು.

ಜೇವರ್ಗಿ ನಗರದ ಬಸವೇಶ್ವರ ವೃತ್ತದ ಬಳಿ ಆಯೋಜಿಸಿದ್ದ ಶ್ರಾವಣ ಮಾಸದ ಅರ್ಥಪೂರ್ಣ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರಾವಣ ಮಾಸವು ಮಂಗಳಕರ ಮಾಸವಾಗಿದೆ ಮತ್ತು ಈ ಮಾಸದಲ್ಲಿ ಶಿವನನ್ನು ಪೂರ್ಣ ಸಮರ್ಪಣಾ ಭಕ್ತಿಯಿಂದ ಪೂಜಿಸುವುದರಿಂದ ಶಾಂತಿಯನ್ನು ಪಡೆಯಲು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಭಕ್ತರು ಸರ್ವಶಕ್ತ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಈ ಪವಿತ್ರ ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಖಂಡಿತವಾಗಿಯೂ ಸವಾಲುಗಳನ್ನು ಜಯಿಸುತ್ತೇವೆ. ಶ್ರಾವಣ ಮಾಸ ಅಥವಾ ಸಾವನ್ ಮಹೀನಾ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನಲ್ಲಿ ಐದನೇ ತಿಂಗಳು. ಆಷಾಢ ಮಾಸದ ನಂತರ ಶ್ರಾವಣ ಮಾಸ ಬರುತ್ತದೆ. ಶ್ರವಣ ಎಂದರೆ ಕೇಳುವುದು. ವರ್ಷದ 12 ತಿಂಗಳು ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿರುವಂತದ್ದು ಎಂದರು.

ಉಪನ್ಯಾಸಕರಾದ ಸೂರ್ಯಕಾಂತ ಕುಲಕರ್ಣಿ, ದೇವಿಂದ್ರಪ್ಪ ವಿಶ್ವಕರ್ಮ, ಗ್ರಂಥಪಾಲಕರಾದ ಸಿದ್ದಣ್ಣ ಹತಗುಂದಿ, ಉಪನ್ಯಾಸಕಿಯರಾದ ಕಾವೇರಿ ಘಾಟೆ, ಪ್ರಥಮ ದರ್ಜೆ ಸಹಾಯಕರಾದ ಅನಂತಕುಮಾರ, ಅಜೀತ್ ಪಾಟೀಲ್, ಜ್ಯೋತಿ ಶಿವಸಾಯಿ ಮಮದಾಪುರ, ಸಾಯಿ ಪ್ರಸನ್ನ, ಶಿವರಾಜ, ಸೂರಜ್ ಸೇರಿದಂತೆ ಸುತ್ತಮುತ್ತಲಿನವರು ಹಾಜರಿದ್ದರು.