ಬೆಳಗಾವಿ: ಎಲ್ಲರೂ ಸಮನಾದ ಆತ್ಮರೂಪ ಎಂದು ಬಸವಾದಿ ಶರಣರು ತಿಳಿದಿದ್ದರು. ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂದು ಡಾ.ಬಾಳಪ್ಪ ಚಿನಗುಡಿ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದಲ್ಲಿ ‘ಶರಣ ಸತಿ ಲಿಂಗ ಪತಿ’ ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಆಧ್ಯಾತ್ಮಿಕ ನಿಲುವು ಲೌಕಿಕದಲ್ಲಿ ಸಾಕಾರಗೊಳ್ಳಲು ಲೌಕಿಕ ಸಂಬಂಧ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಶರಣರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದರು. ಜ್ಯೋತಿ ಬದಾಮಿ ಮಾತನಾಡಿ, ಲಿಂಗಪೂಜೆಯಿಂದ ಚೈತನ್ಯ ಶಕ್ತಿ ಪಡೆಯಬಹುದು. ಇಂತಹ ಶಕ್ತಿಯೇ ನಿಜ ಬದುಕಿನ ಮುಕ್ತಿ ಸಾಧನೆ ಎಂದರು.
ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಲಿಂಗದೀಕ್ಷೆ ಪಡೆದು ಅಂಗದ ಮೇಲೆ ಲಿಂಗ ಧರಿಸಿ ಭಕ್ತಿಯಿಂದ ಪೂಜಿಸುತ್ತಿದ್ದರೆ, ಅವರು ಮರಣ ಹೊಂದಿದಾಗ ಲಿಂಗೈಕ್ಯರಾದರು ಎನ್ನುತ್ತಾರೆ. ಇದ್ದಾಗಲೂ ಹಾಗೂ ಸತ್ತಾಗಲು ಶರಣರು ಎನ್ನಿಸಿಕೊಳ್ಳಬೇಕಾದರೆ ಲಿಂಗ ಧರಿಸಿ, ಪೂಜಿಸಬೇಕು ಎಂದು ಆಶೀರ್ವಚನ ನೀಡಿದರು.
ವಿದ್ಯಾ ಸವದಿ ಪ್ರಾರ್ಥಿಸಿದರು. ರೇಣುಕಾ ಬಿರಾಲ ವಚನ ವಿಶ್ಲೇಷಿಸಿದರು. ಸರೋಜಿನಿ ನಿಶಾನೆದಾರ ಪರಿಚಯಿಸಿದರು. ಆರ್.ಪಿ.ಪಾಟೀಲ ಸ್ವಾಗತಿಸಿದರು. ಎಂ.ವೈ.ಮೆಣಸಿನಕಾಯಿ ನಿರೂಪಿಸಿದರು. ಸೋಮಲಿಂಗ ಮಾವಿನಕಟ್ಟಿ ವಂದಿಸಿದರು. ವಿದ್ಯಾ ಹುಂಡೇಕರ ದಾಸೋಹ ಸೇವೆ ಸಲ್ಲಿಸಿದರು.