ಮುಂಡರಗಿ: ದೈನಂದಿನ ಚಟುವಟಿಕೆಗಳು ನಡೆಯಲು ಮನಸು ಅವಶ್ಯ. ಮನಸು ಮಹಾದೇವನಾಗಲು ಒಳ್ಳೆಯ ಕೆಲಸ ಮಾಡಬೇಕು. ಆಹಾರ, ವಿಹಾರ, ವಿಚಾರ ಉತ್ತಮವಾಗಿದ್ದರೆ ಮನಸು ಶುದ್ಧವಾಗಿರುತ್ತದೆ ಎಂದು ಉಪನ್ಯಾಸಕ ಡಾ.ನಾಗೇಶ ಅಜ್ಜವಾಡಿಮಠ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದಲ್ಲಿ ಅವರು ಮಾತನಾಡಿದರು. ಮನದ ಕಲ್ಮಶ ತೆಗೆಯಲು ಶರಣರ ವಿಚಾರ ಚಿಂತನೆ ಸಹಕಾರಿ. ಶರಣರ ವಚನಗಳನ್ನು ಸದಾ ಓದಬೇಕು. ಉತ್ತಮವಾಗಿ ಬಾಳುವುದಕ್ಕೆ ಸಂಸ್ಕಾರವಂತರ, ಸಜ್ಜನರ ಜೊತೆಗೆ ನಡೆಯಬೇಕು. ಮನುಷ್ಯನ ವಿಚಾರಗಳು ವಿಶಾಲವಾಗಿರಬೇಕು. ಶರಣರಲ್ಲಿ ವಿಶಾಲತೆ ಮತ್ತು ನಿಸ್ವಾರ್ಥ ಭಾವ ಇತ್ತು. ನಾವೆಲ್ಲರೂ ಶ್ರೇಷ್ಠತೆಯಿಂದ, ಕಾಯಕದಿಂದ ಬಾಳಬೇಕು ಎಂದರು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿದರು. ಕುಂದಗೋಳ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಎಸ್.ಎಸ್. ಹಿರೇಮಠ ಅವರ ತಂಡದಿಂದ ವಚನ ಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು. ನಿವೃತ್ತ ಶಿಕ್ಷಕ ಎಸ್.ಆರ್. ಡೋಂಗ್ರೆ ಅವರು ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.