ಜಿಲ್ಲೆ

ಶರಣರ ಆದರ್ಶಗಳಲ್ಲಿ ಅಡಗಿದೆ ನೆಮ್ಮದಿ

ಡಿ.ಪಿ.ನಾಗರಾಜ ಶ್ರೇಷ್ಠಿ


ಚಿತ್ರದುರ್ಗ: ಅಲ್ಲಮಪ್ರಭು, ಬಸವಣ್ಣ ಅವರಿಂದಾಗಿ ಸಮಾಜದಲ್ಲಿ ಸಮಾನತೆಯ ಪರ್ವ ಆರಂಭವಾಯಿತು ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹೇಳಿದರು.
ಮುರುಘಾ ಮಠದಿಂದ ಹೊಳಲ್ಕೆರೆ ತಾಲೂಕು ಕೊಳಾಳು ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಅನುಭಾವ ಶ್ರಾವಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತಿ -ಭಾವದೊಂದಿಗೆ ಶಾಂತಿ ಮಾರ್ಗವನ್ನು ಅನುಸರಿಸಲು 12ನೇ ಶತಮಾನದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಮತ್ತು ಬಸವೇಶ್ವರರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಶಾಂತಿ, ನೆಮ್ಮದಿ ಜೀವನ ನಡೆಸಬೇಕಿದೆ ಎಂದರು.
ಅಲ್ಲಮಪ್ರಭು ಕುರಿತು ನಿವೃತ್ತ ಮುಖ್ಯಶಿಕ್ಷಕ ಡಿ.ಎನ್.ಗೋವಿಂದಪ್ಪ ಮಾತನಾಡಿ, ಅಲ್ಲಮಪ್ರಭು ಎಂದರೆ ಆಧ್ಯಾತ್ಮದ ಶಿಖರ. ಲೋಕ ಸಂಚಾರ ಮಾಡುತ್ತಾ ಅನುಭವ ಮಂಟಪಕ್ಕೆ ಬರುತ್ತಾರೆ. ಅದು ಸಾಮಾನ್ಯ ಮಂಟಪವಲ್ಲ, ಅನೇಕ ಶರಣರಿಂದ ಕೂಡಿದ್ದ ಅದ್ಭುತ ಸ್ಥಳ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕೊಳಾಳು ಮತ್ತು ಮುರುಘಾಮಠಕ್ಕೆ ಅವಿನಾಭಾವ ಸಂಬಂಧವಿದೆ. ಕೆಟ್ಟ ಆಲೋಚನೆಗಳನ್ನು ತ್ಯಜಿಸಿ ಬಸವಾದಿ ಶರಣರ ಸ್ಮರಣೆಯೊಂದಿಗೆ ಸನ್ಮಾರ್ಗದಲ್ಲಿ ನಡೆಬೇಕಿದೆ ಎಂದರು.
ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಗ್ರಾಪಂ ಸದಸ್ಯ ಟಿ.ಸದಾನಂದಪ್ಪ, ಪ್ರಾಚಾರ‌್ಯ ದೇವೆಂದ್ರಪ್ಪ, ಮಠದ ಕೆಂಚಪ್ಪ, ಕೆ.ಪರಮೇಶ್ವರಪ್ಪ, ಎಂ.ನಾಗಪ್ಪ, ಬಿ.ಡಿ.ಕೃಷ್ಣಮೂರ್ತಿ, ಚಿತ್ತಪ್ಪ, ರಾಮಪ್ಪ, ಡಾ.ಉಮಾಶಂಕರ್ ತುಮಕೂರು, ಕೆ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮಠಾಧೀಶರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಗ್ರಾಮದ ಆರಾಧ್ಯ ದೈವ ಕೆಂಚಾವಧೂತರ ಪೂರ್ವಾಶ್ರಮದ ಮನೆ ಹಾಗೂ ಲಿಂಗೈಕ ಸ್ಥಳಕ್ಕೆ ಕರೆದೊಯ್ದು ಪರಿಚಯಿಸಿದರು. ಬಸವೇಶ್ವರ ಆಸ್ಪತ್ರೆ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ, ಸಸಿ ನೆಡುವ ಕಾರ‌್ಯಕ್ರಮ ನಡೆಯಿತು. ಕೆಂಚಪ್ಪ ಸ್ವಾಗತಿಸಿದರು. ಓಬಳೇಶ್ ನಿರೂಪಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

12ರಂದು ಗುಡ್ಡದ ನೇರಲಕೆರೆ
ಮುರುಘಾಮಠದಿಂದ ಹೊಸದುರ್ಗ ತಾಲೂಕು ಗುಡ್ಡದನೇರಲಕೆರೆ ಗ್ರಾಮದಲ್ಲಿ ಆ.12ರಂದು ಅನುಭಾವ ಶ್ರಾವಣ ಕಾರ‌್ಯಕ್ರಮ ಏರ್ಪಡಿಸಿಲಾಗಿದೆ. ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಡಾ. ಶ್ರೀ ಶಾಂತವೀರ ಸ್ವಾಮೀಜಿ ಮತ್ತಿತರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಜಯದೇವ ಜಗದ್ಗುರುಗಳ ಕುರಿತು ನಿವೃತ್ತ ಪ್ರಾಚಾರ‌್ಯ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಲಿದ್ದಾರೆ.