ಜಿಲ್ಲೆ

ಶರಣಬಸವ ವಿವಿ ಮತ್ತೊಂದು ಮೈಲಿಗಲ್ಲು

ಕಲಬುರಗಿ: ಫ್ಲೋರಿಡಾ ಮೂಲದ ಅಟ್ಲಾಂಟಿಸ್ ವಿಶ್ವವಿದ್ಯಾಲಯ, ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯಕ್ಕಾಗಿ ವಿಶ್ವ ಐಟಿ ಸೆಂಟರ್ ಸೇರಿ ಎರಡು ವಿವಿಗಳ ನಡುವೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಉಪಕ್ರಮಗಳಿಗಾಗಿ ಅದರ ಅಂಗಸಂಸ್ಥೆ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕುವ ಮೂಲಕ ಶರಣಬಸವ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಐದು ವರ್ಷ ಹಿಂದೆ ಶುರುವಾದ ಶರಣಬಸವ ವಿವಿ ಮೊದಲನೇ ಸಲ ವಿದ್ಯಾರ್ಥಿ ಮತ್ತು ಶಿಕ್ಷಕರ ವಿನಿಮಯ ಹಾಗೂ ವಿದೇಶದಲ್ಲಿ ಅಧ್ಯಯನ ಜತೆಗೆ ಕನಿಷ್ಠ ವೆಚ್ಚದಲ್ಲಿ ಅಟ್ಲಾಂಟಿಸ್ ವಿವಿ ಪದವಿ ಪಡೆಯಲು ಅವಕಾಶ ಕಲ್ಪಿಸಿದೆ. ಶರಣಬಸವ ವಿವಿ ಕುಲಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಕುಲಪತಿ ಡಾ.ನಿರಂಜನ್ ನಿಷ್ಠಿ ಈ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿರುವ ವಿವಿ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಅಟ್ಲಾಂಟಿಸ್ ವಿವಿ ವ್ಯವಸ್ಥಾಪಕ ನಿರ್ದೇಶಕ ಕೈಲಾಶ ಚಿಂತಾಮಣಿ ಹಾಗೂ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಶರಣಬಸವ ವಿವಿ ಪರ ಸಹಿ ಹಾಕಿದರು. ಅಟ್ಲಾಂಟಿಸ್ ವಿವಿ ಫ್ಲೋರಿಡಾ ಪಿಕ್ಚರಿಸ್ಟಿಕ್ ಮಿಯಾಮಿಯಲ್ಲಿದ್ದರೆ, ವರ್ಲ್ಡ್ ಐಟಿ ಸೆಂಟರ್ ಮತ್ತು ಅದರ ಅಂಗಸAಸ್ಥೆ ಬರ್ಲಿಂಗ್ಟನ್‌ನಲ್ಲಿ ನೆಲೆಗೊಂಡಿವೆ.

ಎರಡು ವಿವಿ ನಡುವಿನ ಒಪ್ಪಂದದ ಪ್ರಮುಖ ಪ್ರಯೋಜನವೆಂದರೆ ಅಟ್ಲಾಂಟಿಸ್ ವಿವಿ ನೀಡುವ ಕೋರ್ಸ್ ವೆಚ್ಚದಲ್ಲಿ ತೀವ್ರ ಕಡಿತ, ಅಂದಾಜಿನ ಪ್ರಕಾರ ಅಟ್ಲಾಂಟಿಸ್ ವಿವಿ ಕೋರ್ಸ್ಗಳ ಪ್ರವೇಶ ವೆಚ್ಚ ಖಾಸಗಿ ಏಜೆನ್ಸಿಗಳ ಮೂಲಕ ಮಾಡುವ ಪ್ರವೇಶ ವೆಚ್ಚಕ್ಕೆ ಹೋಲಿಸಿದರೆ ಶರಣಬಸವ ವಿವಿ ಮೂಲಕ ಪ್ರವೇಶಕ್ಕೆ ಗಣನೀಯ ಕಡಿಮೆ ಖರ್ಚಾಗಲಿದೆ.