ಬಸವಕಲ್ಯಾಣ ತಾಲೂಕಿನ ಮಂಠಾಳದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಅವರ ಪಟ್ಟಾಧಿಕಾರ ವಾರ್ಷಿಕೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವವನ್ನು ಎಂಎಲ್ಸಿ ಎಂ.ಜಿ.ಮುಳೆ ಉದ್ಘಾಟಿಸಿದರು. ಶ್ರೀ ಗುರುಪಾದಲಿಂಗ ಮಹಾಸ್ವಾಮೀಜಿ, ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ, ಜಗನ್ನಾಥ ಮಾಲಿಪಾಟೀಲ್ ಇದ್ದರು. 
ಜಿಲ್ಲೆ

ಶರಣ ಸಂಸ್ಕೃತಿ ಪಾಲನೆಯಿಂದ ಜೀವನ ಸುಖಿ

ಬಸವಕಲ್ಯಾಣ: ಜೀವನದಲ್ಲಿ ಸುಖ, ಶಾಂತಿಯಿಂದ ಬಾಳಲು ಬೇಕಿರುವ ಎಲ್ಲವೂ ಶರಣ ಸಂಸ್ಕೃತಿಯಲ್ಲಿ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಹೇಳಿದರು.

ಮಂಠಾಳ ಗ್ರಾಮದ ಶ್ರೀ ಗುರುಲಿಂಗೇಶ್ವರ ಚೌಕಿ ಮಠದ ಪರಿಸರದಲ್ಲಿ ಎರಡು ದಿನದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಮೂಲ ತತ್ವ ಜನರಿಗೆ ತಿಳಿಸಿಕೊಡುವ ಕೆಲಸ ನಡೆಯಬೇಕಿದೆ ಎಂದರು.

ಜೀವನ ಪರಿಶುದ್ಧತೆಯಿಂದ ಕೂಡಿರಬೇಕಾದರೆ ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರಬೇಕು. ಕಳಬೇಡ ಕೊಲಬೇಡ ವಚನದ ಮೂಲಕ ಅಂತರಂಗ ಬಹಿರಂಗ ಶುದ್ಧಿಯ ಸೂತ್ರವನ್ನು ಬಸವಣ್ಣನವರು ಕಟ್ಟಿಕೊಟ್ಟಿದ್ದಾರೆ. ಕಾಯಕ-ದಾಸೋಹ ಸಿದ್ಧಾಂತವನ್ನು ಶರಣರು ನೀಡಿದ್ದಾರೆ. ಶರಣ ಸಂಸ್ಕೃತಿ ನಿಜ ಜೀವನದಲ್ಲಿ ಪಾಲನೆ ಆಗಬೇಕು. ಈ ನಿಟ್ಟಿನಲ್ಲಿ ಇಂತ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ನೇತೃತ್ವ ವಹಿಸಿದ್ದ ನಾಗೂರನ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಶರಣ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಹಾನಗಲ್ ಕುಮಾರ ಮಹಾಶಿವಯೋಗಳ ಕೊಡುಗೆ ದೊಡ್ಡದು. ಮಂಠಾಳನಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಪಟ್ಠಾಧಿಕಾರ ವಹಿಸಿಕೊಂಡ ನಂತರ ಮಠದ ಪ್ರಗತಿಯ ಜತೆಗೆ ಶರಣ ಸಂಸ್ಕೃತಿ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಜ್ಞಾನ ದಾಸೊಹ ಅನ್ನ ದಾಸೋಹ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಚನ ಸಾಹಿತ್ಯದಲ್ಲಿ ಯುವಕರಿಗೆ ಸಂದೇಶ ವಿಷಯ ಕುರಿತು ಮಹಾಗಾಂವ ಕ್ರಾಸ್ ಸರ್ಕಾರಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕಿ ಡಾ.ಸಂಗೀತಾ ಕಂಬಳಿಮಠ ಉಪನ್ಯಾಸ ಮಂಡಿದರು.

ಮುತ್ತ್ಯಾನಬಲಾದನ ಶ್ರೀ ಗುರುಪಾದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ, ಮಂಠಾಳನ ಶ್ರೀ ಗುರುಲಿಂಗೇಶ್ವರ ಚೌಕಿ ಮಠದ ಪೀಠಾಧಿಪತಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಉತ್ಸವ ಸಮಿತಿ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಜಗನ್ನಾಥ ಮಾಲಿಪಾಟೀಲ್, ನಿವೃತ್ತ ನ್ಯಾಯಾಧೀಶ ಶಂಕರರಾವ ಪೊಲೀಸ್ ಪಾಟೀಲ್, ಪ್ರಮುಖರಾದ ಶಾಂತಪ್ಪ ಶಟಗಾರ, ರಾಮಲಿಂಗಪ್ಪ ಹಾರಕೂಡೆ, ಸಮಿತಿ ಕಾರ್ಯಾಧ್ಯಕ್ಷ ಶಿವಕುಮಾರ ಶಟಗಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಕಾರ್ಯದರ್ಶಿ ರವೀಂದ್ರ ಶಾಯಪ್ಪ, ಉಪಾಧ್ಯಕ್ಷ ವಿಶ್ವನಾಥ ಹುಗ್ಗೆ ಪಾಟೀಲ್, ಮಹಾದೇವ ಮಾಲಿಪಾಟೀಲ್, ಇಂಜಿನಿಯರ್ ಬಸವರಾಜ ಮುಸ್ತಾಪುರೆ, ಪುಷ್ಪರಾಜ ಹಾರಕೂಡೆ, ಬಾಬುರಾವ ಪೊಲೀಸ್ ಪಾಟೀಲ್, ಶಿವರಾಜ ಪಾರಾ, ಅಂದಪ್ಪ ಖಸಗೆ ಇದ್ದರು. ಶಿವಶರಣಯ್ಯ ಮಠಪತಿ ಸ್ವಾಗತಿಸಿದರು. ಗಿರೀಶ ಹತ್ತೆ ನಿರೂಪಣೆ ಮಾಡಿದರು.

ಶರಣರು ನೀಡಿದ ನಡೆ-ನುಡಿ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಚಾರ-ವಿಚಾರ ಪರಿಶುದ್ಧತೆ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ನೈತಿಕ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಇಂತಹ ಉತ್ಸವಗಳು ಯುವ ಸಮೂಹದಲ್ಲಿ ಶರಣ ಸಂಸ್ಕೃತಿಯನ್ನು ಬೆಳೆಸಲು ಪೂರಕ.

| ಡಾ.ಸಂಗೀತಾ ಕಂಬಳಿಮಠ ಅತಿಥಿ ಉಪನ್ಯಾಸಕಿ