ಚಿತ್ರದುರ್ಗ: ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 150 ನೇ ಜಯಂತಿ ಪ್ರಧಾನವಾಗಿರುವ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 5 ರಿಂದ 13 ರವರೆಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ 24 ನೇ ಪೀಠಾಧಿಪತಿ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಆಚರಣೆ ಅವಕಾಶ ಒದಗಿ ಬಂದಿದೆ. ಶ್ರೀಗಳ ಜನಪರ ಕಾರ‌್ಯಗಳು ಸ್ಮರಣೀಯವಾಗಿವೆ. 1975 ರಲ್ಲಿ ಚಿತ್ರದುರ್ಗ-ದಾವಣಗೆರೆಯಲ್ಲಿ ಪೂಜ್ಯರ ಜನ್ಮ ಶತಮಾನೋತ್ಸವ ಅದ್ದೂರಿಯಾಗಿದ್ದು, ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಭಾಗವಹಿಸಿದ್ದರು ಎಂದರು.
ಉತ್ಸವದಲ್ಲಿ ಸೆ.25 ರಿಂದ ಅಕ್ಟೋಬರ್ 4 ರ ವರೆಗೆ ಯೋಗ ಗುರು ಶ್ರೀ ಚನ್ನಬಸವಣ್ಣ ಅವರಿಂದ ಮಠದಲ್ಲಿ ನಿತ್ಯ ಬೆಳಗ್ಗೆ 6 ರಿಂದ ಯೋಗ ಮತ್ತು ಶಿವಯೋಗ ಏರ್ಪಡಿಸಲಾಗಿದೆ. ಅಕ್ಟೋಬರ್ 1 ರಿಂದ 7 ರವರೆಗೆ ನಡೆಯುವ ಕ್ರೀಡಾಜಾತ್ರೆ ಅಂಗವಾಗಿ 1 ರ ಬೆಳಗ್ಗೆ ಮಠದಿಂದ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ. ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳು, ಮಹಿಳೆಯರಿಗೆ ಕ್ರೀಡಾಕೂಟ ಹಾಗೂ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 5 ರಿಂದ 13 ರವರೆಗೆ ನಿತ್ಯ ಬೆಳಗ್ಗೆ 7.30 ಕ್ಕೆ ಸಹಜ ಶಿವಯೋಗ. 5 ರಿಂದ 3 ದಿನಗಳ ಕಾಲ ನಿತ್ಯ ಬೆಳಗ್ಗೆ 10.30 ಕ್ಕೆ ವಚನಕಮ್ಮಟ ಗೋಷ್ಠಿಗಳು ನಡೆಯಲಿವೆ. 5 ರ ಸಂಜೆ 4 ಗಂಟೆಗೆ ಜಯದೇವ ಶ್ರೀಗಳ ಬೆಳ್ಳಿಮೂರ್ತಿ ಪಲ್ಲಕ್ಕಿ ಉತ್ಸವ, ಪಥಸಂಚಲನ ಏರ್ಪಡಿಸಲಾಗಿದೆ. 8 ರಂದು ಕೃಷಿ ಮತ್ತು ಕೈಗಾರಿಕೆ ಮೇಳ, 8 ರಿಂದ 3 ದಿನಗಳ ಕಾಲ ನಿತ್ಯಬೆಳಗ್ಗೆ 10.30 ಮತ್ತು ಸಂಜೆ 6ಕ್ಕೆ ಶ್ರೀಗಳ ಜಯಂತ್ಯುತ್ಸವದ ಅಂಗವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದರು.
*ಸಂಸ್ಮರಣ ಗ್ರಂಥ ಬಿಡುಗಡೆ: 8ರ ಸಂಜೆ 6ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿನ್ಮೂಲಾದ್ರಿ ಚಿದ್ರೂಪಿ ಜಯದೇವ ಶ್ರೀ ಸಂಸ್ಮರಣ ಗ್ರಂಥ ಬಿಡುಗಡೆ ಮಾಡುವರು. 11 ರಂದು ಬಸವಕೇಂದ್ರ ಪದಾಧಿಕಾರಿಗಳು, ಮಹಿಳಾ ಸಮಾವೇಶಗಳು ನಡೆಯಲಿವೆ. 12 ರಂದು ಶರಣಸಂಸ್ಕೃತಿ ಉತ್ಸವ, ಜಾನಪದ ಕಲಾಮೇಳ, ಸಂಜೆ 6.30 ಕ್ಕೆ ಮಕ್ಕಳ ಸಂಭ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
13ರ ಬೆಳಗ್ಗೆ ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಭಾವಚಿತ್ರದೊಂದಿಗೆ ಶೂನ್ಯಪೀಠಾರೋಹಣ, ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಮತ್ತು ಜಯದೇವ ಜಂಗೀ ಕುಸ್ತಿ ಹಾಗೂ ಸಂಜೆ 6 ಕ್ಕೆ ಸಮಾರೋಪದೊಂದಿಗೆ ಸಂಗೀತ ಸಂಭ್ರಮ ಆಯೋಜಿಸಲಾಗಿದೆ ಎಂದರು.
ಉತ್ಸವದ ಭಿತ್ತಿಚಿತ್ರ, ಜಯದೇವ ಶ್ರೀಗಳ ಕುರಿತ ಕಿರು ಹೊತ್ತಿಗೆ ಹಾಗೂ ವಿವಿಧ ಕಾರ‌್ಯಕ್ರಮಗಳ ಕರಪತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ, ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್ ಇತರರು ಇದ್ದರು.
ನಾನಾ ಮಠಾಧೀಶರು, ಗಣ್ಯರು ಭಾಗಿ
ಕೃಷಿ ಮೇಳದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎನ್.ಚಲುವರಾಯಸ್ವಾಮಿ, ಶರಣಬಸಪ್ಪ ದರ್ಶನಾಪೂರ, ಎಚ್.ಕೆ.ಪಾಟೀಲ, ಎಸ್.ಎಸ್.ಮಲ್ಲಿಕಾರ್ಜುನ್ ಭಾಗವಹಿಸುವರು. ವಿಚಾರ ಸಂಕಿರಣದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಡಾ. ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ, ಶ್ರೀಬಸವಲಿಂಗ ಪಟ್ಟದ್ದೇವರು, ಶ್ರೀ ಶಿವರುದ್ರ ಸ್ವಾಮೀಜಿ, ಡಾ. ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಶಿವಾಚಾರ‌್ಯ ಸ್ವಾಮೀಜಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ ಮತ್ತಿತರರು, ಮಹಿಳಾ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್, ಶಶಿಕಲಾ ಜೊಲ್ಲೆ ಮತ್ತಿತರರು ಪಾಲ್ಗೊಳ್ಳುವರು.