ಸವದತ್ತಿ: ಆಹಾರ ಮತ್ತು ಹಣದ ಬದಲಾಗಿ ದುಶ್ಚಟಗಳನ್ನೇ ಭಿಕ್ಷೆಯಾಗಿ ಪಡೆದು ಸ್ವಚ್ಛ ಸಮಾಜ ನಿರ್ಮಿಸಲು ಶ್ರಮಿಸಿದ
ಶರಣ ಸಂಗಮದ ಸೇವೆ ಎಲ್ಲರಿಗೂ ಆದರ್ಶವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಸವಳಭಾವಿಯ ಸ್ವಾಧಿಮಠದಲ್ಲಿ ಸದ್ಭಕ್ತ ಮಂಡಳಿಯಿಂದ ಈಚೆಗೆ ಜರುಗಿದ ಲಿಂ.ಗುರುಮಹಾಂತ ಶ್ರೀಗಳ ಗದ್ದುಗೆ ಪೂಜಾ ಮಂಗಲೋತ್ಸವ ಹಾಗೂ ಶರಣ ಸಂಗಮದ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಜನರನ್ನು ದುಶ್ಚಟಗಳಿಂದ ದೂರ ಮಾಡಲು ಸವದತ್ತಿ ಶರಣ ಸಂಗಮ ಜೋಳಿಗೆ ಕಟ್ಟಿಕೊಂಡು ದುಶ್ಚಟಗಳ ಭಿಕ್ಷಾಟನೆ ನಡೆಸಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ನಾಗರಿಕರಾಗಬೇಕು ಎಂದರು.
ಶಿರಗುಪ್ಪಿಯ ಬಸವ ಭವನದ ಶರಣ ಬಸವರಾಜ ವೆಂಕಟಪುರ ಮಾತನಾಡಿ, ದುಶ್ಚಟಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾನಿಯಾಗುತ್ತದೆ ಎಂದರು. ಓಲೆಮಠದ ಒಡಕಹೊಳಿಯ ಡಾ.ಅಭಿನವಕುಮಾರ ಚೆನ್ನಬಸವ ಶ್ರೀ ಮಾತನಾಡಿ, ಅನುಭಾವ ಪರಂಪರೆ ಹೊಂದಿದ ಸ್ವಾಧಿಮಠ ಒಳ್ಳೆಯ ಮಹತ್ವ ಪಡೆದುಕೊಂಡಿದ್ದು, ಶ್ರೀಮಠದ
ಮಹಾತ್ಮರ ಮಾರ್ಗದರ್ಶನ ಸಮಾಜಕ್ಕೆ ಮಾದರಿ ಎಂದರು.
ಬ್ರಹ್ಮಾನಂದ ಮಠದ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಚ್.ಆರ್.ಪೆಟ್ಟೂರ, ಬಸನಗೌಡ, ಬಸವರಾಜ ಕಪ್ಪಣ್ಣವರ, ಚಂದ್ರು ಶಾಮರಾಯನವರ, ಅಲ್ಲಮಪ್ರಭು ಪ್ರಭುನವರ, ಶಿವಾನಂದ ಹೂಗಾರ, ಬಸವರಾಜ ಗುರಣ್ಣವರ, ಬಸಯ್ಯ ಗುಡ್ಡದಮಠ, ಬಸನಗೌಡ ಪಾಟೀಲ ಇತರರಿದ್ದರು.