ಬಸವಕಲ್ಯಾಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ-೨ ಹಾಗೂ ಶರಣ ಡೋಹರ ಕಕ್ಕಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿಯ ಬಾಲಪ್ರತಿಭೆ ಕು.ದಿತಿ ಶಿರಶ್ಯಾಡಗೆ ಅನುಭವ ಮಂಟಪ ಬಾಲಪ್ರತಿಭೆ ಪ್ರಶಸ್ತಿ ನೀಡಿ ಪೂಜ್ಯರು ಗೌರವಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಎಸ್.ಎಸ್.ನಾಗರಾಳೆ, ಡಾ.ಶಿವಾನಂದ ಎಸ್., ಶಿವಕುಮಾರ ಶಟಕಾರ, ಸುಭಾಷ ಗಾಜರೆ, ಡಾ.ಸೋಮನಾಥ ಯಾಳವಾರ, ಗುಲಾಬರಾವ ತ್ರಿಮುಖೆ ಇದ್ದರು. 
ಜಿಲ್ಲೆ

ಶರಣ ಕಕ್ಕಯ್ಯ ಶ್ರೇಷ್ಠ ವಚನಕಾರ

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹಿರಿಯ ಶರಣ ಡೋಹರ ಕಕ್ಕಯ್ಯನವರು ಶ್ರೇಷ್ಠ ಅನುಭಾವಿ ಶರಣರಾಗಿದ್ದರು. ಅವರ ವಚನಗಳಲ್ಲಿ ಶ್ರೇಷ್ಠ ಅನುಭಾವ ಅಡಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ನಗರದ ಅನುಭವ ಮಂಟಪದಲ್ಲಿ ಶುಕ್ರವಾರ ಸಂಜೆ ಆಯೋಸಿದ್ದ ತಿಂಗಳ ಅನುಭವ ಮಂಟಪ-೨ ಹಾಗೂ ಶರಣ ಡೋಹರ ಕಕ್ಕಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಡೋಹರ ಕಕ್ಕಯ್ಯನವರ ಕುರಿತು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಅತ್ಯಂತ ಗೌರವ ಪೂರ್ವಕವಾಗಿ ಸ್ಮರಿಸಿದ್ದಾರೆ. ಅಪ್ಪ, ಬೊಪ್ಪ ಎಂದು ಕೊಂಡಾಡಿದ್ದಾರೆ ಎಂದರು.

ಕಕ್ಕಯ್ಯನವರು ಮಾಳವ ದೇಶದಿಂದ ಕಲ್ಯಾಣಕ್ಕೆ ಆಗಮಿಸಿದ್ದರು. ಶರಣರ ಜತೆ ಅನುಭಾವ ನಡೆಸಿ, ವಚನಗಳನ್ನು ರಚಿಸಿದರು. ಅವರು ರಚಿಸಿರುವ ೬ ವಚನಗಳು ನಮಗೆ ದೊರೆತಿದ್ದು, ಅಭಿನವ ಚನ್ನಮಲ್ಲಿಕಾರ್ಜುನ ಅವರ ವಚನಾಂಕಿತವಾಗಿದೆ. ವಚನ ಸಾಹಿತ್ಯ ರಕ್ಷಣೆಯಲ್ಲಿ ಡೋಹರ ಕಕ್ಕಯ್ಯನವರ ಬಹುದೊಡ್ಡ ಪಾತ್ರ ಇದೆ. ಕಲ್ಯಾಣದಿಂದ ಉಳವಿಯವರೆಗೆ ವಚನ ಸಾಹಿತ್ಯ ತಲುಪಿಸುವಲ್ಲಿ ಅವರ ಪರಾಕ್ರಮ, ತ್ಯಾಗ, ಬಲಿದಾನ ಇದೆ ಎನ್ನುವುದು ಮರೆಯಲಾಗದು. ಅವರ ಸ್ಮರಣೆ ನಮ್ಮೆಲ್ಲರಲ್ಲಿ ವಚನ ಪ್ರಜ್ಞೆ ಬೆಳೆಸಲಿ ಸದಾಶಯ ವ್ಯಕ್ತಪಡಿಸದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹಾಗೂ ಅಧ್ಯಕ್ಷತೆ ವಹಿಸಿದ್ದ ಮಂಠಾಳ ವಿರಕ್ತಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಹೊಸಪೇಟೆಯ ಸಂಸ್ಕೃತಿ ಚಿಂತಕರು, ಹಿರಿಯ ಸಾಹಿತಿ ಡಾ.ಶಿವಾನಂದ ಎಸ್., ಅವರು ಡೋಹರ ಕಕ್ಕಯ್ಯನವರ ಕುರಿತು ವಿಶೇಷ ಅನುಭಾವ ನೀಡಿದರು.

ಹಿರಿಯ ಸಾಹಿತಿ ಸೋಮನಾಥ ಯಾಳವಾರ, ಮಂಠಾಳನ ಯುವ ಮುಖಂಡ ಶಿವಕುಮಾರ ಶಟಕಾರ, ಶರಣ ಡೋಹರ ಕಕ್ಕಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾಜರೆ, ತಾಲೂಕು ಅಧ್ಯಕ್ಷ ಗುಲಾಬರಾವ ತ್ರಿಮುಖೆ ಇದ್ದರು. ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್.ಎಸ್.ನಾಗರಾಳೆ ಸ್ವಾಗತಿಸಿದರು. ಅಶೋಕ ಕುಂಬಾರ ವಂದಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಣೆ ಮಾಡಿದರು. ವೀರಣ್ಣ ಕುಂಬಾರ, ರಾಜು ಜುಬರೆ ವಚನ ಸಂಗೀತ ನಡೆಸಿದರು.

ಬಾಲಪ್ರತಿಭೆಗೆ ಪ್ರಶಸ್ತಿ: ಬಸವನಬಾಗೇವಾಡಿಯ ಬಾಲಪ್ರತಿಭೆ ಕು. ದಿತಿ ಶಿರಶ್ಯಾಡಗೆ ಅನುಭವ ಮಂಟಪ ಬಾಲಪ್ರತಿಭೆ ಪ್ರಶಸ್ತಿ ನೀಡಿ ಪೂಜ್ಯರು ಗೌರವಿಸಿದರು.ಪ್ರಶಸ್ತಿ ಸ್ವೀಕರಿಸಿದ ದಿತಿ ವಚನಗಳನ್ನು ಹೇಳುವ ಮೂಲಕ ಗಮನ ಸೆಳೆದಳು. ಪೂಜ್ಯ ನಾಗಲಾಂಬಿಕಾದೇವಿ ಸಂಪಾದಿಸಿದ ಅನುಭಾವಾಮೃತ ಸರೋವರದಲ್ಲಿ ಗ್ರಂಥ ಲೋಕಾರ್ಪಣೆ ಪೂಜ್ಯರಿಂದ ನೆರವೇರಿಯಿತು.

ಮನಸ್ಸು ಜೋಡಿಸುವುದೇ ಧರ್ಮ: ಅರಿವು ವಿಸ್ತರಿಸುವುದು ಧರ್ಮ. ಅರಿವು ತಡೆಯುವುದೇ ಅಧರ್ಮ ಎಂದು ಹೊಸಪೇಟೆಯ ಹಿರಿಯ ಸಾಹಿತಿ, ಸಾಂಸ್ಕೃತಿಕ ಚಿಂತಕ ಡಾ.ಶಿವಾನಂದ ಎಸ್. ಹೇಳಿದರು. ನಮ್ಮನ್ನು ನಾವು ಆರ್ಥ ಮಾಡಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದೇ ನಿಜವಾದ ಧರ್ಮ. ಜೀವನದ ಪಾವಿತ್ರ್ಯತೆ ಕಾಪಾಡುವುದು, ಮನಸ್ಸು-ಮನಸ್ಸುಗಳನ್ನು ಜೋಡಿಸುವುದು ಧರ್ಮ ಎಂದು ವಿಶ್ಲೇಷಿಸಿದರು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಇದು ಸಹಜ ಹಾಗೂ ಸರಳ ಧರ್ಮ. ಇದೊಂದು ಅಂತರಂಗದ ಯಾತ್ರೆ. ಧರ್ಮ ಶೃದ್ಧೆ ಎಂದರೆ ಜಾತ್ರೆ ಅಲ್ಲ. ಅರಿವಿನ ಅಂತರಂಗದ ಯಾತ್ರೆ. ಧರ್ಮ ಶೃದ್ಧೆ ಬರಬೇಕಾದರೆ ಅಹಂಕಾರ ಮರೆಯಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವುದು. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಈ ನೆಲದಲ್ಲಿ ಆತ್ಮ ಜ್ಞಾನ ಪಡೆದ ಅನುಭಾವಿಗಳು. ವಚನ ಸಾಹಿತ್ಯ ಹೃದಯದಿಂದ ಹೊರ ಬಂದಿರುವ ಅನುಭಾವದ ಅಮೃತ ಎಂದು ಬಣ್ಣಿಸಿದರು.