ನಾಪೋಕ್ಲು: ಬೆಟ್ಟಗೇರಿ ವಲಯ ಕಾಂಗ್ರೆಸ್ ವತಿಯಿಂದ ಪಾಲೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣಅವರ ಹೆಸರಿನಲ್ಲಿ ಮಹಾ ರುದ್ರಾಭಿಷೇಕ ಪೂಜೆಯನ್ನು ಮಂಗಳವಾರ ಕೈಗೊಳ್ಳಲಾಯಿತು.
ಕ್ಷೇತ್ರದ ಶಾಸಕರಿಗೆ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ವಲಯ ಕಾಂಗ್ರೆಸ್ ವತಿಯಿಂದ ಪೂಜೆ ಮಾಡಲಾಯಿತು. ಶಾಸಕ ಪೊನ್ನಣ್ಣ ಅವರ ಶ್ರೇಯೋಭಿವೃದ್ಧಿಗೆ ಪಕ್ಷದ ಹಿರಿಯರಾದ ನಾಪಂಡ ಗಣೇಶ ಹೆರವನಾಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೂಜಾ ವಿಧಿ-ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕರಾದ ದೇವಿಪ್ರಸಾದ ಅವರು ನೆರವೇರಿಸಿ ಬಳಿಕ ನೆರೆದವರಿಗೆ ತೀರ್ಥ, ಪ್ರಸಾದ ವಿತರಿಸಿದರು.
ಬೆಟ್ಟಗೇರಿ ವಲಯ ಅಧ್ಯಕ್ಷ ಕೊಡಗನ ತೀರ್ಥಪ್ರಸಾದ್, ಬೆಟ್ಟಗೇರಿ ಗ್ರಾಪಂ ಅಧ್ಯಕ್ಷರಾದ ಚಳಿಯಂಡ ಕಮಲಾ ಉತ್ತಯ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಮೋಹನ್‌ರಾಜ್, ಮಾಜಿ ವಲಯ ಅಧ್ಯಕ್ಷ ಕಾಳೇರಮ್ಮನ ಕುಮಾರ್, ಅರ್ವತೊಕ್ಲು ಬೂತ್ ಅಧ್ಯಕ್ಷ ಪೂಜಾರಿರ ಪ್ರದೀಪ್‌ಕುಮಾರ, ವಲಯದ ಉಪಾಧ್ಯಕ್ಷ ಬಾಲಾಡಿ ಪ್ರತಾಪ್, ಕಾರ್ಯದರ್ಶಿಯಾದ ಮಜೀದ್ ಹಾಗೂ ಬೆಟ್ಟಗೇರಿ, ಪಾಲೂರು ಬೂತ್ ಅಧ್ಯಕ್ಷ ದೊರೆರಾಜ್, ಮಚ್ಚಂಡ ಲಾಲು,ಬೂತ್ ಅಧ್ಯಕ್ಷರು ಮೊಹಮ್ಮದ್ ಇದ್ದರು.