ಶನಿವಾರಸಂತೆ: ಪಟ್ಟಣದಲ್ಲಿ ದಿನೇದಿನೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಸರಿಪಡಿಸಲಿ, ಉತ್ತಮ ಬಸ್ ನಿಲ್ದಾಣ ನಿರ್ಮಾಣವಾಗಲಿ….. ಶನಿವಾರಸಂತೆ ಪ್ರೆಸ್‌ಕ್ಲಬ್‌ನಲ್ಲಿ ವಿಜಯವಾಣಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಟ್ಟಣದ ನಾಗರಿಕರ ಒತ್ತಾಯವಿದು.
ಕೊಡಗು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಶನಿವಾರಸಂತೆ ಹೋಬಳಿ ಕೇಂದ್ರ ಪಟ್ಟಣವಾಗಿದ್ದು ಇಲ್ಲಿಗೆ ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ವ್ಯಾಪ್ತಿಯ ಜನರು ಪ್ರತಿದಿನ ವಾಹನಗಳಲ್ಲಿ ಬರುವುದು ಅನಿವಾರ್ಯವಾಗಿದೆ. ಶನಿವಾರಸಂತೆ ಪಟ್ಟಣ ದಿನೇದಿನೆ ಅಭಿವೃದ್ಧಿ ಹೊಂದುತ್ತಿರುವ ಜತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು.
ಪಟ್ಟಣದಲ್ಲಿ ಮುಖ್ಯರಸ್ತೆ ಬದಿಯಲ್ಲಿ ಅಂಗಡಿ, ಹೊಟೇಲ್, ಶಾಪ್ ಕಾಂಪ್ಲೆಕ್ಸ್, ಕಟ್ಟಡಗಳಿದ್ದು ಮುಖ್ಯರಸ್ತೆ ತೀರ ಇಕ್ಕಟ್ಟಾಗಿರುವುದು ಮತ್ತು ವಾಹನಗಳ ದಟ್ಟಣೆಯ ನಡುವೆ ಎಲ್ಲೆಂದರಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕಾರು, ಜೀಪು, ಬೈಕ್, ಬಸ್ ಮುಂತಾದ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಶನಿವಾರಸಂತೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ, ಅದನ್ನು ಸರಿಪಡಿಸಲು ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಮಧ್ಯಪೇಟೆಯ ಯೂನಿಯನ್ ಬ್ಯಾಂಕ್ ಸಮೀಪ ಮತ್ತು ಕೆಆರ್‌ಸಿ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹಿಂದೆ ಪೊಲೀಸರು ವಾಹನಗಳನ್ನು ತಿಂಗಳಲ್ಲಿ 15 ದಿನ ಎಡಬದಿಯಲ್ಲಿ, 15 ದಿನ ಬಲ ಬದಿಯಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಿದ್ದರು. ಇದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾಗಿತ್ತು. ಆದರೆ ಕಳೆದ 4 ವರ್ಷದಿಂದ ವಾಹನ ಸವಾರರು ಹಿಂದೆ ಇದ್ದ ನಿಯಮವನ್ನು ಗಾಳಿಗೆ ತೂರಿ ಸಿಕ್ಕ ಸಿಕ್ಕಲೆಲ್ಲ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇದರಿಂದ ಬಸ್ಸು, ಲಾರಿ ಮುಂತಾದ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಪಟ್ಟಣದ ಕೆಆರ್‌ಸಿ ವೃತ್ತದಲ್ಲಂತೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 40ಕ್ಕಿಂತ ಹೆಚ್ಚಿನ ಕೆಎಸ್‌ಆರ್‌ಟಿ ಬಸ್ಸುಗಳು ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ತುಮಕೂರು ಇನ್ನು ಮುಂತಾದ ಕಡೆಗಳಿಗೆ ಶನಿವಾರಸಂತೆ ಮೂಲಕ ಸಂಚರಿಸುತ್ತವೆ, 25ಕ್ಕಿಂತ ಹೆಚ್ಚಿನ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ಆದರೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳ ನಿಲುಗಡೆಗೆ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ಎಲ್ಲ ಬಸ್ಸುಗಳು ಒಂದೆ ಕಡೆಯಲ್ಲಿ ನಿಲುಗಡೆ ಮಾಡಲಾಗುತ್ತವೆ. ಇದರ ಜತೆಗೆ ಎರಡೂ ಬದಿಯಲ್ಲಿ ಕಾರು, ಜೀಪು, ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಶನಿವಾರ ಸಂತೆ ದಿನವಾಗಿದ್ದು ವಾಹನಗಳ ದಟ್ಟಣೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ.
ಶನಿವಾರ ದಿನ ಓನ್‌ವೇ ಸಂಚಾರ ನಿಯಮ ಇದ್ದರೂ ವಾಹನ ಸವಾರರು ಉಲ್ಲಂಘಿಸುತ್ತಾರೆ. ಕೆಆರ್‌ಸಿ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಸಿಬ್ಬಂದಿ ವಾಹನಗಳ ದಟ್ಟಣೆಯನ್ನು ನೋಡಿಯೂ ನೋಡದಂತೆ ಸುಮ್ಮನಾಗುತ್ತಾರೆ. ಇದರಿಂದ ವಾಹನ ಸವಾರರು ತಮಗೆ ಇಷ್ಟಬಂದ ಕಡೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ಪೊಲೀಸರು ಹಿಂದಿನ ಕ್ರಮವನ್ನು ಮುಂದುವರಿಸಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ದಂಡ ವಿಧಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಬಹುದು. ವಾಹನಗಳು ಎಲ್ಲಿ ನಿಲ್ಲಬೇಕು ಎಂದು ಸ್ಥಳ ಗುರುತು ಮಾಡಲಿ. ನಾನು ಈ ಹಿಂದೆ ಗ್ರಾಮಪಂಚಾಯಿತಿ ಸದಸ್ಯನಾಗಿದ್ದಾಗಿನಿಂದಲೂ ಹೇಳಿಕೊಂಡು ಬಂದಿದ್ದರೂ ಈ ಸಮಸ್ಯೆಯನ್ನು ಸಂಬಂಧಪಟ್ಟವರು ನಿವಾರಿಸುವಲ್ಲಿ ವಿಫಲರಾಗಿದ್ದಾರೆ.
ಎಸ್.ಎನ್ ಪಾಂಡು, ಕಾರ್ಯದರ್ಶಿ, ನಿವೃತ್ತ ಸೈನಿಕರ ಸಂಘ, ಶನಿವಾರಸಂತೆ
ಪಟ್ಟಣದಲ್ಲಿ ಸಿಕ್ಕಿದ ಕಡೆಯಲೆಲ್ಲ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಜತೆಗೆ ವರ್ತಕರ ವ್ಯಾಪಾರ ವಹಿವಾಟಿಗೆ ಅಡಚಣೆಯಾಗುತ್ತಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ನಿಲುಗಡೆ ವ್ಯವಸ್ಥೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಸಯ್ಯದ್, ಹಣ್ಣಿನ ಅಂಗಡಿ ಮಾಲೀಕ, ಶನಿವಾರಸಂತೆ
ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಬೈಪಾಸ್ ರಸ್ತೆ ಬದಿಯಲ್ಲಿ ಶನಿವಾರ ದಿನ ಹೊರತುಪಡಿಸಿದರೆ ಮಿಕ್ಕಿದ ದಿನಗಳಲ್ಲಿ ಕಾರು, ಜೀಪು, ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕು. ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ. ಈಗಾಗಲೆ ಪಂಚಾಯಿತಿಯಿಂದ ಮಾರ್ಗಸೂಚಿ ನೀಡಲಾಗಿದೆ. ಸಂಬಂಧಪಟ್ಟವರು ಈಗ ಅದನ್ನು ಕಾರ್ಯಗತಗೊಳಿಸಬೇಕಾಗಿದೆ.
ಸರ್ದಾರ್ ಅಹಮ್ಮದ್, ಅಧ್ಯಕ್ಷ ವರ್ತಕರ ಸಂಘ, ಶನಿವಾರಸಂತೆ
ಶನಿವಾರಸಂತೆಗೆ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಬರುತ್ತಿದ್ದು ಇಲ್ಲಿಂದ ಮೈಸೂರು, ಮಂಗಳೂರು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಧರ್ಮಸ್ಥಳ, ಹಾಸನ ಸೇರಿದಂತೆ ಇನ್ನಿತರ ಭಾಗಗಳಿಗೆ ಬಸ್‌ಗಳು ಸಂಚರಿಸುತ್ತವೆ. ಆದರೆ ಎಲ್ಲ ಬಸ್‌ಗಳು ಒಂದೆಡೆ ನಿಲ್ಲುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸೂಕ್ತ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿ.
ಎಸ್.ಆರ್.ಶಿವಣ್ಣ, ನಾಗರಿಕ, ಶನಿವಾರಸಂತೆ
ಶನಿವಾರಸಂತೆ ಫೀ.ಮಾ.ಕಾರ್ಯಪ್ಪ ಹುಟ್ಟಿದ ಸ್ಥಳವಾಗಿದೆ. ಆದರೆ ಶನಿವಾರಸಂತೆಯಲ್ಲಿ ಬಸ್ ನಿಲ್ದಾಣವಿಲ್ಲದೆ ಜನರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಇಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ದಾಣ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತಿದೆ.
ದೀಕ್ಷಿತ್, ಶನಿವಾರಸಂತೆ, ವರ್ತಕ
ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಿಚಕ್ರ ವಾಹನಗಳು ಸೇರಿದಂತೆ ಇನ್ನಿತರ ವಾಹನಗಳನ್ನು ನಿಲುಗಡೆಗೆ ಸ್ಥಳ ಗುರುತು ಮಾಡಲಿ, ವಾಹನ ದಟ್ಟಣೆಯಾಗುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿ ಶಿಸ್ತುಕ್ರಮ ಕೈಗೊಂಡಲ್ಲಿ ಮಾತ್ರ ಸಮಸ್ಯೆ ಪರಿಹಾರವಾಗ ಬಹುದು.ಇತ್ತೀಚೆಗೆ ಶನಿವಾರಸಂತೆಯಲ್ಲಿ ಅಂಗಡಿ ಮುಂಗಟ್ಟುಗಳ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತಿದೆ. ಇದರಿಂದ ಗ್ರಾಹಕರು ಅಂಗಡಿ ಮುಂಗಟ್ಟುಗಳಿಗೆ ತೆರಳಲು ಪರದಾಡುವಂತಾಗಿದೆ.
ನಟೇಶ್, ವರ್ತಕ, ವೀರಭದ್ರೇಶ್ವರ ಬೇಕರಿ, ಶನಿವಾರಸಂತೆ
ಶನಿವಾರಸಂತೆಯಲ್ಲಿ ಉತ್ತಮ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಇಲ್ಲಿ ಪ್ರತಿನಿತ್ಯ 40ಕ್ಕಿಂತ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಹಾಗೂ 25ಕ್ಕಿಂತಲೂ ಹೆಚ್ಚು ಖಾಸಗಿ ಬಸ್‌ಗಳು ಇಲ್ಲಿಗೆ ಬಂದು ತೆರಳುತ್ತವೆ. ಆದರೆ ಬಸ್ ನಿಲ್ದಾಣವಿಲ್ಲದೆ ಎಲ್ಲ ಬಸ್‌ಗಳು ರಸ್ತೆಯ ಬದಿಯಲ್ಲೆ ನಿಲ್ಲುತ್ತವೆ. ಪ್ರಯಾಣಿಕರು ಪ್ರತಿನಿತ್ಯ ಬಸ್ ಹತ್ತಲು ಪರದಾಡುವಂತಾಗಿದೆ. ಯಾವ ಬಸ್ ಯಾವ ಸ್ಥಳದಲ್ಲಿ ನಿಲ್ಲಬೇಕು ಎಂದು ಸ್ಥಳ ಗುರುತು ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಸುರೇಶ್, ವರ್ತಕ, ಶನಿವಾರಸಂತೆ