ಜಿಲ್ಲೆ

ಶನಿವಾರಸಂತೆ ಭಾಗದಲ್ಲಿ ಭಾರಿ ಮಳೆ

ಶನಿವಾರಸಂತೆ: ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಭಾನುವಾರ ಹಗಲು ತುಂತುರು ಮಳೆಯಾಗುತ್ತಿತ್ತು. ಆದರೆ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಗಾಳಿ ಸಮೇತ ಭಾರಿ ಮಳೆಯಾಗಿದೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಸರಾಸರಿ 75 ಮಿ.ಮೀ.(3 ಇಂಚು)ಮಳೆ ದಾಖಲಾಗಿದೆ.

ಸೋಮವಾರ ಬೆಳಗ್ಗೆ ಭಾರಿ ಮಳೆ, ಗಾಳಿಗೆ ಮಾಲಂಬಿ-ಕಣಿವೆಬಸವನಹಳ್ಳಿ ಬಲಿ ಮುಖ್ಯರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರವೊಂದು ಬಿದ್ದಿದೆ. ರಸ್ತೆ ಬದಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದೆ. ಇದರಿಂದ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.